ಕೊಪ್ಪಳ: ತಮ್ಮ ಕಚೇರಿ ನೌಕರನ ವಿಮಾ ಕಂತು ಪಾವತಿಸುವಲ್ಲಿ ನಿರ್ಲಕ್ಷಿಸಿ, ಕರ್ತವ್ಯ ಲೋಪ ಎಸಗಿರುವ ಕೊಪ್ಪಳ ಜಿಲ್ಲಾಧಿಕಾರಿಗಳು 6 ಲಕ್ಷ ರೂಪಾಯಿ ವಿಮೆಯನ್ನು ನೀಡಬೇಕು ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.
ವಿಮೆಯ ಕ್ಲೇಮ್ 6 ಲಕ್ಷ ರೂಪಾಯಿ, ಮಾನಸಿಕ ಹಿಂಸೆಗೆ 10 ಸಾವಿರ ರೂಪಾಯಿ ಪರಿಹಾರ ಹಾಗೂ ಕೋರ್ಟ್ ವೆಚ್ಚಕ್ಕೆ 2500 ರೂಪಾಯಿ ಸೇರಿ ಒಟ್ಟು 6,10,2500 ರೂ.ಗಳನ್ನು ಪಾವತಿ ಮಾಡುವಂತೆ ಜಿಲ್ಲಾಧಿಕಾರಿ ಕನಕವಲ್ಲಿ ಅವರಿಗೆ ತಿಳಿಸಲಾಗಿದೆ.
ಏನಿದು ಕೇಸ್?: ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ನೌಕರ ಮಂಜುನಾಥ್ ಅಳವಂಡಿ ಎಂಬವರು 2014ರ ಮಾರ್ಚ್ 28 ರಂದು ಎಲ್‍ಐಸಿ ವಿಮೆ ಮಾಡಿಸಿದ್ದರು. ಇದು ವೇತನ ಉಳಿತಾಯ ಪಾಲಿಸಿ ಆಗಿದ್ದರಿಂದ ಪ್ರತಿ ತಿಂಗಳ ವೇತನದಲ್ಲೇ ವಿಮಾ ಕಂತು ಕಡಿತಗೊಂಡು ಪಾವತಿಯಾಗುತ್ತಿತ್ತು. ಆದರೆ 2014ರ ಮೇ ತಿಂಗಳ ವಿಮಾ ಕಂತು ಪಾವತಿಯಾಗಿಲ್ಲ. ಮಂಜುನಾಥ 2015ರ ಅಕ್ಟೋಬರ್ 1 ರಂದು ಮಂಜುನಾಥ ಅಳವಂಡಿ ಅಪಘಾತದಲ್ಲಿ ಮೃತಪಟ್ಟಿದ್ದು, ನಾಮಿನಿಯಾಗಿದ್ದ ಮಂಜುನಾಥ್ ಅವರ ಪತ್ನಿ ಶಿಲ್ಪಾ ವಿಮೆಯ ಹಣಕ್ಕೆ ಅರ್ಜಿ ಸಲ್ಲಿಸಿದ್ದರು.
ಎಲ್‍ಐಸಿ ಕಚೇರಿ ನಿಮ್ಮ ಪಾಲಸಿ ಕಂತು ಪಾವತಿಯಾಗದ್ದರಿಂದ ಪಾಲಿಸಿ ಲ್ಯಾಪ್ಸ್ ಆಗಿದೆ ಎಂದು ವಿವರಣೆ ನೀಡಿ ಕೈ ತೊಳೆದುಕೊಂಡಿತ್ತು. ಆಗ ಶಿಲ್ಪಾ ಕೊಪ್ಪಳ ಜಿಲ್ಲಾ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು. ಗ್ರಾಹಕರ ನ್ಯಾಯಾಲಯ, ಎಲ್‍ಐಸಿ ಮತ್ತು ಡಿಸಿಗೆ ನೋಟೀಸ್ ನೀಡಿತ್ತು. ನ್ಯಾಯಾಲಯಕ್ಕೆ ಹಾಜರಾದ ಎಲ್‍ಐಸಿ ಅಧಿಕಾರಿಗಳು, ಮಂಜುನಾಥ ವಿಮಾ ಕಂತು ಪಾವತಿ ಮಾಡದ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವುದನ್ನು ತಿಳಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ನ್ಯಾಯಾಲಯದ ನೋಟಿಸ್ ಗೆ ಯಾವುದೇ ಉತ್ತರವನ್ನು ನೀಡಿರಲಿಲ್ಲ. ಇದೆಲ್ಲವನ್ನೂ ಗಮನಿಸಿದ ಕೊಪ್ಪಳ ಜಿಲ್ಲಾ ಗ್ರಾಹಕರ ನ್ಯಾಯಾಲಯ ಅಧ್ಯಕ್ಷೆ ಎಚ್.ಡಿ. ಏಕತಾ ಹೆಗ್ಡೆ, ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ಕರ್ತವ್ಯ ಲೋಪ ಕಾಣುತ್ತಿದೆ ಎಂದು ತೀರ್ಮಾನಿಸಿ ದಂಡವನ್ನು ಪಾವತಿಸುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ.