ಕಳ್ಳನೆಂದು ಭಾವಿಸಿ ಕೂಲಿ ಕಾರ್ಮಿಕನನ್ನು ಹೊಡೆದು ಕೊಂದ ಗ್ರಾಮಸ್ಥರು

Public TV
1 Min Read
construction man

ಹೈದರಾಬಾದ್: ಕೂಲಿ ಕಾರ್ಮಿಕನೊಬ್ಬನನ್ನು ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಖದೀಮ ಎಂದು ಭಾವಿಸಿ ಗ್ರಾಮಸ್ಥರು ಮನಬಂದಂತೆ ಹೊಡೆದು ಜೀವ ತೆಗೆದ ಅಮಾನವೀಯ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣದ ಧರ್ಮರಾಮ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೂಲಿ ಕಾರ್ಮಿಕ ಗಂಗಾಧರ್(25) ಮೃತ ದುರ್ದೈವಿ. ಅರ್ಸಪಲ್ಲಿ ಮೂಲದ ಗಂಗಾಧರ್ ಕಟ್ಟಡ ನಿರ್ಮಾಣ ಮಾಡುವ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಹೀಗಾಗಿ ಧರ್ಮರಾಮ್ ಗ್ರಾಮದಲ್ಲಿ ಕಟ್ಟುತ್ತಿದ್ದ ಕಟ್ಟಡವೊಂದರಲ್ಲಿ ಕೂಲಿ ಮಾಡುತ್ತ ಆ ಗ್ರಾಮದಲ್ಲಿಯೇ ಕುಟುಂಬ ಸಮೇತ ವಾಸವಾಗಿದ್ದನು. ಮಂಗಳವಾರ ಬೆಳಗ್ಗೆ ಗಂಗಾಧರ್ ಎಂದಿನಂತೆ ಕೂಲಿ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೊರಟ್ಟಿದ್ದನು. ಆದರೆ ಮಾರ್ಗ ಮಧ್ಯೆ ಆತನನ್ನು ಧರ್ಮರಾಮ್ ಗ್ರಾಮಸ್ಥರು ತಡೆದು, ಸ್ಥಳೀಯ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ನೀನೇ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದೀಯ ಎಂದು ಗಂಗಾಧರ್ ನನ್ನು ಮನಬಂದಂತೆ ಬೈದು, ಹೊಡೆಯಲು ಆರಂಭಿಸಿದ್ದಾರೆ.

Police Jeep

ಗ್ರಾಮಸ್ಥರ ಥಳಿತಕ್ಕೆ ಗಂಭೀರ ಗಾಯಗೊಂಡಿದ್ದ ಆತನನ್ನು ಕೆಲವರು ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಗಂಗಾಧರ್ ಸಾವನ್ನಪ್ಪಿದ್ದನು. ಬಳಿಕ ಮರಣೋತ್ತರ ಪರೀಕ್ಷೆಗೆಂದು ಆತನ ಮೃತದೇಹವನ್ನು ಪೊಲೀಸರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಸಂಬಂಧ ಮೃತ ಕೂಲಿ ಕಾರ್ಮಿಕನ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನಾಮಧೇಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 202ನೇ ವಿಧಿ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *