ಚಂಡೀಗಢ: ಹಿಮಾಚಲ ಪ್ರದೇಶ ಮಂಡಿ ಕ್ಷೇತ್ರದ ನೂತನ ಸಂಸದೆ ಆಗಿರುವ ನಟಿ ಕಂಗನಾ ರಣಾವತ್ (Kangana Ranaut) ಅವರಿಗೆ ಕಪಾಳಮೋಕ್ಷ ಮಾಡಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರನ್ನ ಕರ್ತವ್ಯದಿಂದ ಅಮಾನತುಗೊಳಿಸಿ, ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿ ಕುಲ್ವಿಂದರ್ ಕೌರ್ (Kulwinder Kaur) ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಂಗನಾ ರಣಾವತ್ ಅವರಿಗೆ ಕಪಾಳಮೋಕ್ಷ ಮಾಡಿದ್ದರಿಂದ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಏನಿದು ಘಟನೆ?
ಮಂಡಿಯ ನೂತನ ಬಿಜೆಪಿ ಸಂಸದೆ ಕಂಗನಾ ರಣಾವತ್‌ಗೆ ಸಿಐಎಸ್ಎಫ್ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್ ಚಂಡೀಗಢ ವಿಮಾನ ನಿಲ್ದಾಣದಲ್ಲಿ (Chandigarh Airport) ಕಪಾಳಮೋಕ್ಷ ಮಾಡಿದ ಘಟನೆ ನಡೆದಿತ್ತು. ರೈತರ ಆಂದೋಲನಕ್ಕೆ ಸಂಬಂಧಿಸಿದಂತೆ ಕಂಗನಾ ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಕಪಾಳಮೋಕ್ಷ ಮಾಡಿರುವುದಾಗಿ ಆಕೆ ಹೇಳಿಕೊಂಡಿದ್ದರು. ಇದನ್ನೂ ಓದಿ: ಇವಿಎಂ ಸತ್ತಿದ್ಯಾ ಅಥವಾ ಬದುಕಿದ್ಯಾ? – ವಿಪಕ್ಷ ನಾಯಕರನ್ನ ಲೇವಡಿ ಮಾಡಿದ ಮೋದಿ
2020ರಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಬೃಹತ್ ಪ್ರತಿಭಟನೆಗೆ ಇಳಿದಿದ್ದರು. ಈ ವೇಳೆ ನಟಿ ಕಂಗನಾ, ರೈತರು 100 ರೂ.ಗೆ ಅಲ್ಲಿ ಕುಳಿತಿದ್ದಾರೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು. ವ್ಯಾಪಕ ಟೀಕೆ ವ್ಯಕ್ತವಾದ ನಂತರ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು. ನಟಿ ಈ ಹೇಳಿಕೆ ನೀಡಿದಾಗ ತನ್ನ ತಾಯಿ ಅಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದರು. ಹಾಗಾಗಿ ನಟಿ ಹೇಳಿಕೆಯಿಂದ ನೋವುಂಟಾಗಿದ್ದು, ಕಪಾಳಮೋಕ್ಷ ಮಾಡಿದೆ ಎಂದು ಕೌರ್ ಆಕ್ರೋಶ ಹೊರಹಾಕಿದ್ದರು. ಇದಾದ ಬಳಿಕ ಕಂಗನಾ ಪೊಲೀಸರಿಗೆ ದೂರು ನೀಡಿ ಬಳಿಕ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದರು. ಇದನ್ನೂ ಓದಿ: ನಕಲಿ ಆಧಾರ್ ಕಾರ್ಡ್ ಬಳಸಿ ಸಂಸತ್ ಪ್ರವೇಶಿಸಲು ಯತ್ನಿಸಿದ ಮೂವರ ಬಂಧನ
ಘಟನೆ ಬಳಿಕ ಕಂಗನಾ ಹೇಳಿದ್ದೇನು?
ಘಟನೆ ಬಳಿಕ ವೀಡಿಯೋ ಸಂದೇಶ ಬಿಡುಗಡೆ ಮಾಡಿದ್ದ ಕಂಗನಾ, ನನಗೆ ಮಾಧ್ಯಮಗಳು ಮತ್ತು ನನ್ನ ಹಿತೈಷಿಗಳಿಂದ ಸಾಕಷ್ಟು ಫೋನ್ ಕರೆಗಳು ಬರುತ್ತಿವೆ. ಮೊದಲನೆಯದಾಗಿ ನಾನು ಸುರಕ್ಷಿತವಾಗಿದ್ದು, ಸಂಪೂರ್ಣವಾಗಿ ಚೆನ್ನಾಗಿದ್ದೇನೆ. ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಚೆಕ್ ಮುಗಿಸಿ ಹೊರ ಬಂದ ತಕ್ಷಣ ಎರಡನೇ ಕ್ಯಾಬಿನ್‌ನಲ್ಲಿದ್ದ ಸಿಐಎಸ್‌ಎಫ್‌ನ ಭದ್ರತಾ ಸಿಬ್ಬಂದಿ ನನ್ನ ಕೆನ್ನೆಗೆ ಹೊಡೆದರು. ಈ ವೇಳೆ ಯಾಕೆ ಹೀಗೆ ಮಾಡಿದೆ ಎಂದು ಆಕೆಯನ್ನು ಪ್ರಶ್ನಿಸಿದಾಗ, ರೈತರ ಪ್ರತಿಭಟನೆಗೆ ನನ್ನ ಬೆಂಬಲವಿದೆ ಎಂದಳು. ಸದ್ಯ ನಾನು ಸುರಕ್ಷಿತವಾಗಿದ್ದೇನೆ ಆದರೆ ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಉಗ್ರವಾದದ ಬಗ್ಗೆ ನನಗೆ ಕಾಳಜಿಯೂ ಇದೆ ಎಂದಿದ್ದರು.