ಸಿನಿಮಾದ ಕನಸು ಯಾರು ಬೇಕಾದರೂ ಕಾಣಬಹುದು. ಹಣ ಇದ್ದರೆ ಯಾರು ಬೇಕಾದರೂ ಸಿನಿಮಾ ಮಾಡಬಹುದು. ಆದ್ರೆ ಜನಕ್ಕೆ ಇಷ್ಟವಾಗೊ ರೀತಿಯ ಕಂಟೆಂಟ್ ಕೊಡಬೇಕು ಅಂದರೆ ಅಲ್ಲೊಂದು ಅವಿರತ ಶ್ರಮ ಇರಲೇಬೇಕು. ಆಸೆ ಜೊತೆಗೆ ಪರಿಶ್ರಮ ಜೊತೆಗೂಡಿದ್ರೆ ಒಂದೊಳ್ಳೆ ಸಿನಿಮಾ ಬೆಳ್ಳಿ ತೆರೆಯ ಮೇಲೆ ರಾರಾಜಿಸೋದರಲ್ಲಿ ಅನುಮಾನವಿಲ್ಲ. ಅಂಥ ಒಂದು ಭರವಸೆ ಮೂಡಿಸಿದ್ದು ಕಾನ್ಸೀಲಿಯಂ ಅನ್ನೋ ಸಿನಿಮಾ.
ಇದು ಸಂಪೂರ್ಣ ಹೊಸಬರ ಸಿನಿಮಾ. ಹಾಗಂತ ಎಲ್ಲಿಯೂ ಕಾಂಪ್ರೊಮೈಸ್ ಆಗಿಲ್ಲ. ಹೊಸಬರೇ ಆದರೂ ಪಕ್ಕಾ ಕ್ವಾಲಿಟಿ ಸಿನಿಮಾ ಕೊಡಬೇಕೆಂಬ ಹಂಬಲ ಯುವ ನಿರ್ದೇಶಕ ಸಮರ್ಥ್ ಆಸೆ. ಹೀಗಾಗಿ ಸಿನಿಮಾಗಾಗಿ ಸಾಕಷ್ಟು ಶ್ರಮ ಹಾಕಿದ್ದಾರೆ. ಸಮಯ ನೀಡಿದ್ದಾರೆ. ಸಮರ್ಥ್ ಸಾಫ್ಟ್‌ವೇರ್ ಉದ್ಯೋಗಿ. ಆದರೆ ಅದ್ಯಾವಾಗ ಸಿನಿಮಾ ಮೇಲಿನ ಆಸೆ ಚಿಗುರೊಡೆಯಿತೋ ಅಂದೇ ಪೆನ್ನು ಪೇಪರ್ ತಗೊಂಡು ವರ್ಕ್ ಮಾಡೋದಕ್ಕೆ ಶುರು ಮಾಡಿದ್ರು. ಸಿನಿಮಾದ ಆಸೆ ಹುಟ್ಟಿದ್ದು 2011ರಲ್ಲೇ ಆದ್ರು ಕಾನ್ಸೀಲಿಯಂಗೆ ಅಧಿಕೃತ ಮುದ್ರೆ ಒತ್ತಿದ್ದು 2018ರಲ್ಲಿ. ಅಂದಿನಿಂದ ಕಥೆ ಬರೆದು ಅದಕ್ಕೊಂದು ಅದ್ಭುತ ರೂಪ ಕೊಟ್ಟು ಸೈನ್ಸ್ ಫಿಕ್ಷನ್ ಜಾನರ್ ನಡಿ ಸಿನಿಮಾವನ್ನ ರೆಡಿ ಮಾಡಿದ್ರು. ಈಗ ರಿಲೀಸ್ ಹಂತಕ್ಕೂ ಬಂದು ನಿಂತಿದ್ದು ಡಿಸೆಂಬರ್ 10 ಕ್ಕೆ ಬಿಡುಗಡೆಯಾಗುತ್ತಿದೆ. ಈ ಕಾನ್ಸೀಲಿಯಂ ಸಿನಿಮಾ ಸುಮ್ ಸುಮ್ನೆ ಹುಟ್ಟಿಕೊಂಡಿದ್ದು ಅಲ್ಲ, ಒಂದೇ ಸರಿಗೆ ರೆಡಿಯಾಗಿದ್ದು ಅಲ್ಲ. ಮೊದಲೇ ಹೇಳಿದ್ದೀವಲ್ಲ ಅವಿರತ ಪರಿಶ್ರಮವಿತ್ತು. ಕೆಲಸದ ನಡುವೆ ಬಿಡುವು ಮಾಡಿಕೊಂಡು ಸಿದ್ಧ ಮಾಡಿರೋ ಸಿನಿಮಾವಿದು. ಯಾಕಂದ್ರೆ ಈ ಸಿನಿಮಾಗೆ ಕೈ ಜೋಡಿಸಿದ ಪ್ರತಿಯೊಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳು. ಹೀಗಾಗಿ ಸಿಗುವ ವೀಕೆಂಡ್ ರಜೆಯಲ್ಲಿ ಸಿನಿಮಾ ಮಾಡಿ ಮುಗಿಸಿದ್ದಾರೆ. ತಾಂತ್ರಿಕತೆಯಲ್ಲಿ ದೇಶ ಮಟ್ಟದಲ್ಲಿಯೇ ಹೆಸರು ಮಾಡುವಂಥಾ ನವೀನ ಮಾದರಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆಯಂತೆ. ಈ ಚಿತ್ರದ ಚಿತ್ರೀಕರಣ ಆರಂಭವಾಗಿದ್ದದ್ದು ೨೦೧೮ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಮೂರು ವರ್ಷಗಳ ಕಾಲ ನಿರಂತರವಾಗಿ ಇದರ ಕೆಲಸ ಕಾರ್ಯ ನಡೆದಿದೆ. ಅದರಲ್ಲಿ ಬಹು ಹೆಚ್ಚಿನ ಸಮಯ ತಾಂತ್ರಿಕ ಶ್ರೀಮಂತಿಕೆಗಾಗಿಯೇ ಮೀಸಲಾಗಿಡಲಾಗಿತ್ತಂತೆ.
ಸೀತಾರಾಮ ಶಾಸ್ತ್ರಿ ಪ್ರೊಡಕ್ಷನ್ ಹೌಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರವನ್ನು ರೇಷ್ಮಾ ರಾವ್ ಕಾರ್ಯಕಾರಿ ನಿರ್ಮಾಪಕರಾಗಿ ನಿರ್ಮಾಣ ಮಾಡಿದ್ದಾರೆ. ಸುದರ್ಶನ್ ಜಿ.ಕೆ ಛಾಯಾಗ್ರಹಣ, ದ್ವೈಪಾಯಣ್ ಸಿಂಘ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಇನ್ನುಳಿದಂತೆ ಸಮರ್ಥ್, ಪ್ರೀತಂ, ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ, ಖುಷಿ ಆಚಾರ್, ಜಗದೀಶ್ ಮಲ್ನಾಡ್ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. ಡಿಸೆಂಬರ್ 10ಕ್ಕೆ ಸಿನಿಮಾ ತೆರೆಗೆ ಬರಲಿದ್ದು ಪ್ರೇಕ್ಷಕರ ಪ್ರತಿಕ್ರಿಯೆ ಕೇಳಲು ಚಿತ್ರತಂಡ ಕಾತುರವಾಗಿದೆ.