ಶಿಲ್ಲಾಂಗ್: ಮೇಘಾಲಯ (Meghalaya) ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ನ್ಯಾಷನಲ್ ಪೀಪಲ್ಸ್ ಪಾರ್ಟಿ ಪಕ್ಷದ ಮುಖ್ಯಸ್ಥ ಕಾನ್ರಾಡ್ ಸಂಗ್ಮಾ (Conrad Sangma) ರಾಜ್ಯಪಾಲ ಫಾಗು ಚೌಹಾಣ್ (Phagu Chauhan) ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಅನುಮತಿ ಕೋರಿ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅವರು ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.
ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಅವರು, ಬಿಜೆಪಿಯ ಇಬ್ಬರು ಶಾಸಕರು, ಬಗ್ಮಾರಾದ ಸ್ವತಂತ್ರ ಶಾಸಕರು ಸೇರಿದಂತೆ ಹಲವಾರು ಶಾಸಕರು ನಮಗೆ ಬೆಂಬಲ ನೀಡಿದ್ದಾರೆ. ಈ ಹಿನ್ನೆಲೆ ನಾವು ಸರ್ಕಾರ ರಚನೆಗೆ ತಯಾರಿ ಆರಂಭಿಸಿದ್ದೇವೆ, ಕಾದು ನೋಡಿ ಎಂದು ಅವರು ಹೇಳಿದ್ದಾರೆ.
11 ಸ್ಥಾನಗಳ ಮೂಲಕ 2ನೇ ಅತಿದೊಡ್ಡ ಪಕ್ಷವಾಗಿರುವ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿಯ (UDP) ಜೊತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತನಾಡಲು ನಿರಾಕರಿಸಿದ ಸಂಗ್ಮಾ, ನಾವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಅವರೊಂದಿಗೆ ಚರ್ಚಿಸುತ್ತೇವೆ. ನಾನು ಈಗ ಎಲ್ಲಾ ವಿವರಗಳನ್ನು ನೀಡಲು ಬಯಸುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸೋನಿಯಾ ಗಾಂಧಿ ಮತ್ತೆ ಆಸ್ಪತ್ರೆಗೆ ದಾಖಲು
ಪ್ರಮಾಣ ವಚನ ಸಮಾರಂಭದ ದಿನಾಂಕವನ್ನು ನಿರ್ಧರಿಸಿಲ್ಲ ಮತ್ತು ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸುವ ಬಗ್ಗೆ ಅವರಿಂದ ದೃಢೀಕರಣವನ್ನು ಪಡೆದ ನಂತರವೇ ತಿಳಿಸುವುದಾಗಿ ಸಂಗ್ಮಾ ಹೇಳಿದರು. ಇದನ್ನೂ ಓದಿ: ಲಂಚ ಪ್ರಕರಣದ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ: ರಣದೀಪ್ ಸುರ್ಜೇವಾಲ