ಬೆಂಗಳೂರು: ಹಣಕಾಸು ಖಾತೆ ಹಂಚಿಕೆ ಸಮಸ್ಯೆಯ ಬೆನ್ನಲ್ಲೇ ಈಗ ಇಂಧನ ಖಾತೆಗಾಗಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಹಾಗೂ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಮಧ್ಯೆ ಪೈಪೋಟಿ ಆರಂಭವಾಗಿದೆ.
ಲೋಕೋಪಯೋಗಿ ಹಾಗೂ ಇಂಧನ ಖಾತೆ ಎರಡು ತಮಗೆ ಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಹೋದರ ಎಚ್.ಡಿ.ರೇವಣ್ಣ ಅವರು ಪಟ್ಟುಹಿಡಿದರೆ, ಇಂಧನ ಖಾತೆಯನ್ನು ನನಗೆ ನೀಡಿ ಎಂದು ಡಿಕೆ ಶಿವಕುಮಾರ್ ಹಠ ಹಿಡಿದಿದ್ದಾರೆ.
Advertisement
ಕಳೆದ 5 ವರ್ಷದಿಂದ ಇಂಧನ ಖಾತೆಯನ್ನು ನಾನು ನಿಭಾಯಿಸಿದ್ದೇನೆ. ಅಲ್ಲಿ ಇನ್ನಷ್ಟು ಕೆಲಸಗಳು ಉಳಿದಿದ್ದು, ನನಗೆ ಇಂಧನ ಖಾತೆ ಬೇಕೇ ಬೇಕು ಎಂದು ಡಿಕೆಶಿ ಹೈಕಮಾಂಡ್ ಮುಂದೆ ತಮ್ಮ ವಾದವನ್ನು ಮಂಡಿಸಿದ್ದಾರೆ. ಇಬ್ಬರು ಘಟಾನುಘಟಿ ನಾಯಕರಾದ ಕಾರಣ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಇಬ್ಬರನ್ನು ತೃಪ್ತಿ ಪಡಿಸಲು ಕೊನೆಗೆ ಸಂಧಾನ ಸೂತ್ರಕ್ಕೆ ಬಂದಿದ್ದಾರೆ.
Advertisement
ಆರಂಭದಲ್ಲಿ ಇಬ್ಬರಿಗೂ ಈ ಖಾತೆಯನ್ನು ನೀಡದೇ ಇರುವ ತೀರ್ಮಾನಕ್ಕೆ ಬರಲಾಗಿತ್ತು. ಆದರೆ ಈಗ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಅಜಾದ್ ಮಧ್ಯಸ್ಥಿಕೆ ವಹಿಸಿ ಡಿ.ಕೆ.ಶಿವಕುಮಾರ್ ಅವರಿಗೆ ಇಂಧನ ಖಾತೆಯನ್ನು ನೀಡಲು ನಿರ್ಧಾರ ತೆಗೆದುಕೊಂಡಿದ್ದಾರೆ.
Advertisement
ರೇವಣ್ಣ ಅವರಿಗೆ ಜಲಸಂಪನ್ಮೂಲ ಖಾತೆಯನ್ನು ನೀಡಲು ಒಪ್ಪಿಗೆ ನೀಡಿದ್ದು, ಅವರ ಮನವೊಲಿಸುವ ಜವಾಬ್ದಾರಿಯನ್ನು ಕಾಂಗ್ರೆಸ್ ಮುಖಂಡರು ವಹಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕೈ ನಾಯಕರ ಈ ಸೂತ್ರಕ್ಕೆ ರೇವಣ್ಣ ಒಪ್ಪಿಗೆ ನೀಡಿದರೆ ಖಾತೆ ಬಿಕ್ಕಟ್ಟು ಇತ್ಯರ್ಥವಾಗಲಿದೆ.