ಡಿಕೆಶಿ ಬಂಧನ- 1 ಬಸ್‍ಗೆ ಬೆಂಕಿ, 4 ಬಸ್‍ಗಳ ಮೇಲೆ ಕಲ್ಲು ತೂರಾಟ

Public TV
3 Min Read
dkshi arrest protest

-ರಾಜ್ಯದ ಹಲವೆಡೆ ಬಂದ್!

ಬೆಂಗಳೂರು: ದೆಹಲಿ ನಿವಾಸದಲ್ಲಿ ಹಣ ಸಿಕ್ಕ ಪ್ರಕರಣ ಸಂಬಂಧ ಇಡಿ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ 8.30ಕ್ಕೆ ಮಾಜಿ ಸಚಿವ, ಕರ್ನಾಟಕ ಕಾಂಗ್ರೆಸ್ ಆಪದ್ಬಾಂಧವ ಡಿಕೆ ಶಿವಕುಮಾರ್ ರನ್ನು ಬಂಧಿಸಿದೆ. ಡಿಕೆ ಶಿವಕುಮಾರ್ ಬಂಧನವಾಗುತ್ತಿದ್ದಂತೆ, ಮಾಜಿ ಸಚಿವರ ಬೆಂಬಲಿಗರು ದೆಹಲಿ ಸೇರಿದಂತೆ ರಾಜ್ಯದಲ್ಲಿ ಕೂಡ ರಾತ್ರಿಯೇ ಪ್ರತಿಭಟನೆ ನಡೆಸಿದರು. ಅಲ್ಲದೇ ಅಭಿಮಾನಿಗಳು ಬೀದಿಗಿಳಿದು ಬೆಂಕಿಹಚ್ಚಿ ಆಕ್ರೋಶ ಹೊರಹಾಕಿದರು. ಈ ವೇಳೆ ಕೆಲವೆಡೆ ಹಿಂಸಾಚಾರ ಕೂಡ ನಡೆಯಿತು.

ರಾಮನಗರ: ರಾಮನಗರದಲ್ಲಿ ಡಿಕೆಶಿ ಅಭಿಮಾನಿಗಳಿ ಕೆಎಸ್‍ಆರ್ ಟಿಸಿಯ 1 ಬಸ್‍ಗೆ ಬೆಂಕಿ 4 ಬಸ್‍ಗಳ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದರು. ಐಜೂರು ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಅಭಿಮಾನಿಗಳು ರೋಷಾವೇಶ ಪ್ರದರ್ಶಿಸಿದರು. ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಕೇಂದ್ರ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಹೆದ್ದಾರಿ ತಡೆದ ಪ್ರತಿಭಟನಕಾರರು – ಪೊಲೀಸರ ನಡುವೆ ತಳ್ಳಾಟ, ನೂಕಾಟ ನಡೀತು. ಈ ವೇಳೆ ಡಿಕೆ ಅಭಿಮಾನಿಯೋರ್ವ ವಾಹನದ ಕೆಳಗೆ ಮಲಗಲು ಯತ್ನಿಸಿದ ಘಟನೆ ಕೂಡ ನಡೆಯಿತು.

DKSHI Protest 5

ಕಲ್ಲಹಳ್ಳಿ ಗೇಟ್, ಕನಕಪುರ: ಡಿಕೆ ಅಭಿಮಾನಿಗಳು ಕನಕಪುರ – ಕೋಡಿಹಳ್ಳಿ ಸಂಪರ್ಕ ರಸ್ತೆ ಬಂದ್ ಮಾಡಿ ರಸ್ತೆಗಳಲ್ಲಿ ಮರದ ದಿಮ್ಮಿಗಳನ್ನಿಟ್ಟು ಬೆಂಕಿ ಹಚ್ಚಿದರು. ಇದಲ್ಲದೇ ರಸ್ತೆಗೆ ಕಲ್ಲುಗಳನ್ನಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನಿಸಿದರು. ಇದೇ ವೇಳೆ ಎಸ್.ಪಿ ಸ್ವತಃ ಪರಿಸ್ಥಿತಿ ನಿಯಂತ್ರಿಸಿದರು. ಕನಕಪುರ ಗಲ್ಲಿ ಗಲ್ಲಿಗಳಲ್ಲೂ ಪೊಲೀಸರ ನಿಯೋಜನೆ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾತನೂರು, ಚನ್ನಬಸಪ್ಪ ಸರ್ಕಲ್‍ನಲ್ಲೂ ಅಭಿಮಾನಿಗಳು ಟೈರ್ ಗೆ ಬೆಂಕಿ ಹಚ್ಚಿ ಹೆದ್ದಾರಿ ತಡೆದು ಪ್ರತಿಭಟಿಸಿದರು.

ದಾವಣಗೆರೆ: ನಗರದ ಜಯದೇವ ವೃತ್ತದಲ್ಲಿ ಎನ್‍ಎಸ್‍ಯುಇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಟೈರ್ ಗೆ ಬೆಂಕಿ ಹಚ್ಚಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು ಇದೇ ವೇಳೆ ಪೊಲೀಸರು ಟೈರ್ ಗಳನ್ನು ವಶಪಡಿಸಿಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತಂದರು.

DKSHI Protest 7

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ 7ರ ಚದಲಪುರ ಬಳಿ ಡಿಕೆಶಿ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಇದರಿಂದ ಸಹಜವಾಗಿ ವಾಹನ ಸಂಚಾರ ಅಸ್ತವ್ಯಸ್ತವಾಯ್ತು. ಸ್ಥಳಕ್ಕೆ ನಂದಿಗಿರಿಧಾಮ ಪೊಲೀಸರು ಭೇಟಿ ಮಾಡಿ ಪರಿಸ್ಥಿತಿ ಹತೋಟಿಗೆ ತಂದರು.

ಮಂಡ್ಯ: ನಗರದ ಸಂಜಯ್ ಸರ್ಕಲ್ ಬಳಿ ಯೂತ್ ಕಾಂಗ್ರೆಸ್‍ನಿಂದ ಪ್ರತಿಭಟನೆ ನಡೆಸಲಾಯ್ತು. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ, ಬಿಜೆಪಿ ವಿರುದ್ಧ ಡಿಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ರು. ಮಂಡ್ಯದ ಆಯಾಕಟ್ಟಿನ ಸ್ಥಳಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮದ್ದೂರಿನ ಟಿಬಿ ಸರ್ಕಲ್ ವೃತ್ತದ ಮೈಸೂರು – ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯ್ತು. ಅಲ್ಲದೇ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಲಾಯ್ತು.

DKSHI Protest 2

ತುಮಕೂರು: ಜಿಲ್ಲೆಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕುಣಿಗಲ್‍ನಲ್ಲಿ ಕಾಂಗ್ರೆಸ್ ಶಾಸಕ ರಂಗನಾಥ ನೇತೃತ್ವದಲ್ಲಿ ಮಂಗಳೂರು- ಬೆಂಗಳೂರು ರಸ್ತೆ ತಡೆದು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದರು. ಟೌನ್‍ಹಾಲ್ ವೃತ್ತದಲ್ಲಿ ಟೈರ್‍ಗೆ ಬೆಂಕಿ ಹಾಕಿ ಜಿಲ್ಲಾ ಕಾಂಗ್ರೆಸ್ ಘಟಕ ಪ್ರತಿಭಟನೆ ನಡೆಸಿತು.

ಹಾಸನ: ಹಾಸನದ ಚನ್ನರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಬಸ್ ನಿಲ್ದಾಣದ ಎದುರು ಮಾಹಿತಿ ನೀಡದೆ ಪ್ರತಿಭಟನೆ ಮಾಡಿದ್ದಕ್ಕೆ ಪೊಲೀಸರು ಪ್ರಶ್ನಿಸಿದರು. ಈ ವೇಳೆ ಕೆಲಕಾಲ ಕೈ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಡಿಕೆಶಿಯನ್ನು ಬಂಧಿಸಿದ್ದಾರೆ ನಮ್ಮನ್ನೂ ಬಂಧಿಸಿ ಎಂದು ಕಾಂಗ್ರೆಸ್ ಕಾರ್ಯಕರ್ತರ ಕಿಡಿಕಾರಿದರು.

DKSHI Protest 3

ಬಳ್ಳಾರಿಯ ಹರಪ್ಪನಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಟೈರ್‍ಗೆ ಬೆಂಕಿ ಹಾಕಿ ಡಿಕೆಶಿ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಡಿಕೆ ಶಿವಕುಮಾರ್ ಬಂಧನ ಖಂಡಿಸಿ ದೆಹಲಿಯ ಆರ್‍ಎಂಎಲ್ ಆಸ್ಪತ್ರೆಯ ಎದುರು ಯೂತ್ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ವೇಳೆ ಡಿಕೆ ಅಭಿಮಾನಿಗಳು ರಸ್ತೆಯಲ್ಲೇ ಹೊರಳಾಡಿ ತಮ್ಮ ಆಕ್ರೋಶ ಹೊರಹಾಕಿದ್ರು. ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಡಿಕೆ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲೇ ಭಿತ್ತಿಪತ್ರಗಳನ್ನು ಹಿಡಿದು ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.

ಇವತ್ತು ಎಲ್ಲೆಲ್ಲಿ ಬಂದ್?
ಡಿಕೆ ಶಿವಕುಮಾರ್ ಬಂಧನ ವಿರೋಧಿಸಿ ಇವತ್ತು ಬೆಂಗಳೂರಿನ ವಿವಿಧ ರಸ್ತೆ, ತುಮಕೂರು ಪ್ರಮುಖ ನಗರಗಳು, ಮಂಡ್ಯದ ಮಳವಳ್ಳಿ, ಕನಕಪುರ, ದಾವಣಗೆರೆ, ರಾಮನಗರದಲ್ಲಿ ಬಂದ್ ನಡೆಯಲಿದ್ದು, ಪ್ರತಿಭಟನೆ ನಡೆಸಲು ಕಾಂಗ್ರೆಸ್ ಕಾರ್ಯಕರ್ತರು ನಿರ್ಧರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *