ಚಿಕ್ಕಮಗಳೂರು: ಕಾಫಿನಾಡಿನ ಯೂತ್ ಹಾಗೂ ಮಹಿಳಾ ಕಾಂಗ್ರೆಸ್ಸಿಗರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸೀರೆ, ಬಳೆ, ಪ್ಯಾಂಟ್ ಮತ್ತು ಶರ್ಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಶೋಭಾ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ನೀವು ಹೇಳಿರುವ ಹೇಳಿಕೆಯಿಂದ ಹೆಣ್ಣಿನ ಮೇಲೆ ನಿಮಗೆ ಗೌರವ ಇಲ್ಲ ಎಂದು ತೋರಿಸುತ್ತದೆ. ಇದು ಸಿದ್ದರಾಮಯ್ಯನವರಿಗೆ ಅವರಿಗೆ ಮಾತ್ರ ಮಾಡಿದ ಅವಮಾನವಲ್ಲ. ಇದು ಇಡೀ ಮಹಿಳಾ ಕುಲಕ್ಕೆ ಮಾಡಿದ ಅವಮಾನವಾಗಿದೆ. ಶೋಭಾ ಅವರು ತಾನು ಒಬ್ಬ ಮಹಿಳೆ ಎಂಬುದನ್ನು ಮರೆತಿದ್ದಾರೆ. ಹೀಗಾಗಿ ಬಳೆಯ ಬಗ್ಗೆ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೆಲಸ ಮಾಡಲು ಆಗದಿದ್ದರೆ ಕೈಗೆ ಬಳೆ ತೊಟ್ಟುಕೊಳ್ಳಿ: ಸಿದ್ದು ವಿರುದ್ಧ ಕರಂದ್ಲಾಜೆ ಕಿಡಿ
ಶೋಭಾ ಕರಂದ್ಲಾಜೆ ಹೆಣ್ಣೋ-ಗಂಡೋ ಎಂಬುದನ್ನು ಅವರೇ ತೀರ್ಮಾನಿಸಲಿ. ಅದಕ್ಕಾಗಿ ಸೀರೆ, ಬಳೆ, ಪ್ಯಾಂಟ್ ಮತ್ತು ಶರ್ಟ್ ಅನ್ನು ಸಾಂಕೇತಿಕವಾಗಿ ಕೊಡುತ್ತಿದ್ದೇವೆ. ಹೆಣ್ಣಾದರೆ ಸೀರೆ-ಬಳೆ ತೊಡಲಿ, ಗಂಡಾದರೆ ಪ್ಯಾಂಟ್ ಶರ್ಟ್ ಹಾಕಲಿ ಎಂದು ಶೋಭಾ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಗುಡುಗಿದರು.
ಕೂಡಲೇ ಅವರು ಸಿದ್ದರಾಮಯ್ಯ ಬಳಿ ಕ್ಷಮೆ ಕೋರಬೇಕು. ಅಷ್ಟೇ ಅಲ್ಲದೇ ಅವರ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಹೇಳಿ ಮಹಿಳಾ ಕಾರ್ಯಕರ್ತರು ಧಿಕ್ಕಾರ ಕೂಗಿದರು.