ಬೆಂಗಳೂರು: ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಬಸವರಾಜ ಬೊಮ್ಮಾಯಿ ಹಾಗೂ ಈ. ತುಕಾರಾಮ್ ಅವರ ರಾಜೀನಾಮೆಯಿಂದ ತೆರವಾದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ (By Election) ನಡೆದರೂ ರಾಜ್ಯದ ಮಟ್ಟಿಗೆ ಹೆಚ್ಚು ಸದ್ದು ಮಾಡಿದ್ದು, ಹೈವೋಲ್ಟೇಜ್ ಕಣ ಚನ್ನಪಟ್ಟಣ.
ಅಂತಿಮವಾಗಿ ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ (CP Yogeshwar) ಗೆಲುವಿನ ನಗಾರಿ ಬಾರಿಸಿದ್ದಾರೆ. ಕಾಂಗ್ರೆಸ್ ರೂಪಿಸಿದ ಚಕ್ರವ್ಯೂಹ ಬೇಧಿಸುವಲ್ಲಿ ನಿಖಿಲ್ ಕುಮಾರಸ್ವಾಮಿ 3ನೇ ಬಾರಿಯೂ ವಿಫಲರಾಗಿದ್ದಾರೆ. ಈ ಪ್ರತಿಷ್ಠೆಯ ರಾಜಕೀಯ ಆಟದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಕೈ ಮೇಲಾಗಿದೆ. ಇದನ್ನೂ ಓದಿ: ಜೈಲರ್ ಬಾಕ್ಸ್‌ನಿಂದ ಬ್ಯಾಲೆಟ್ ಬಾಕ್ಸ್‌ವರೆಗೆ – ಒಂದೇ ವರ್ಷದಲ್ಲಿ 2ನೇ ಬಾರಿ ಹೇಮಂತ್ ಸೊರೆನ್ ಸಿಎಂ
ಸ್ವಂತ ಕ್ಷೇತ್ರದಲ್ಲಿ ಪುತ್ರನನ್ನು ಗೆಲ್ಲಿಸಲಾಗದೇ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮುಜುಗರ ಅನುಭವಿಸಿದ್ದಾರೆ. ದೇವೇಗೌಡರು ನಿರಂತರ 10 ದಿನ ಪ್ರಚಾರ ನಡೆಸಿ ಅಬ್ಬರಿಸಿದರೂ, ಬಿಜೆಪಿ ನಾಯಕರು ಬಂದು ಸಂಘಟಿತವಾಗಿ ಪ್ರಚಾರ ನಡೆಸಿದ್ರೂ, ಅದು ನಿಖಿಲ್‌ಗೆ ಗೆಲುವು ತಂದುಕೊಡಲಿಲ್ಲ. ಮತ ಎಣಿಕೆಯ ಮೊದಲ 6 ಸುತ್ತಿನ ವರೆಗೂ ಹಾವು – ಏಣಿ ಆಟ ನಡೆದಿತ್ತು. ಆದ್ರೆ 6ನೇ ಸುತ್ತಿನ ಬಳಿಕ ಫಲಿತಾಂಶದ ದಿಕ್ಕೇ ಬದಲಾಯಿತು. ಯೋಗೇಶ್ವರ್ ಸತತ ಮುನ್ನಡೆ ಸಾಧಿಸುತ್ತಾ ಹೋದ್ರು, ಇದರಿಂದ ಗೆಲುವು ʻಕೈʼ ಪಾಲಾಯಿತು.
ಮೂರು ಕ್ಷೇತ್ರಗಳ ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮದಲ್ಲಿ ಮುಳುಗಿದ್ರೆ, ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಮೌನಕ್ಕೆ ಶರಣಾದ್ರು. ಸೋಲು ಗೆಲುವಿನ ಬಗ್ಗೆ ಎಂದಿನಂತೆ ರಾಜಕಾರಣಿಗಳು ಮಾತಾಡಿದರು. ಗೌಡರ ಒಕ್ಕಲಿಗ ನಾಯಕತ್ವವನ್ನು ಜನ ಕಿತ್ಕೊಂಡಿದ್ದಾರೆ ಎಂದು ಯೋಗೇಶ್ವರ್ ವ್ಯಾಖ್ಯಾನಿಸಿದರು. ಇದನ್ನೂ ಓದಿ: ಬೊಂಬೆನಗರಿಯಲ್ಲಿ ಯೋಗೇಶ್ವರ್ ಮ್ಯಾಜಿಕ್ ಹೇಗಾಯ್ತು? ಹಿಂದೆ ಯಾವ ಪಕ್ಷದಿಂದ ಯಾವಾಗ ಗೆದ್ದಿದ್ದರು?
ಚನ್ನಪಟ್ಟಣ ಫಲಿತಾಂಶ – ಯಾರಿಗೆ ಎಷ್ಟು ಮತ?
* ಯೋಗೇಶ್ವರ್ – ಕಾಂಗ್ರೆಸ್ – ಗೆಲುವು – 1,12,642 ಮತ
* ನಿಖಿಲ್ – ಎನ್‌ಡಿಎ – ಸೋಲು – 87,229 ಮತ
* ಕಾಂಗ್ರೆಸ್ ಗೆಲುವಿನ ಅಂತರ – 25,413 ಮತ
ಚನ್ನಪಟ್ಟಣ ಫಲಿತಾಂಶ ಟ್ರೆಂಡ್ಸ್ ಹೇಗಿತ್ತು?
* 1ನೇ ಸುತ್ತು – ಯೋಗೇಶ್ವರ್‌ಗೆ 49 ಮತಗಳ ಮುನ್ನಡೆ (ಗ್ರಾಮೀಣ)
* 2ನೇ ಸುತ್ತು – ನಿಖಿಲ್‌ಗೆ 135 ಮತಗಳ ಮುನ್ನಡೆ (ಗ್ರಾಮೀಣ)
* 5ನೇ ಸುತ್ತು – ನಿಖಿಲ್‌ಗೆ 1,306 ಮತಗಳ ಮುನ್ನಡೆ (ಗ್ರಾಮೀಣ)
* 6ನೇ ಸುತ್ತು – ಯೋಗೇಶ್ವರ್‌ಗೆ 783 ಮತಗಳ ಮುನ್ನಡೆ (ಟೌನ್)
* 10ನೇ ಸುತ್ತು – ಯೋಗೇಶ್ವರ್‌ಗೆ 19,799 ಮತಗಳ ಮುನ್ನಡೆ (ಟೌನ್)
* 20ನೇ ಸುತ್ತು – 25,515 ಮತಗಳ ಅಂತರದಿಂದ ಯೋಗೇಶ್ವರ್ ಗೆಲುವು
ಚನ್ನಪಟ್ಟಣ ಫಲಿತಾಂಶ ವಿಶ್ಲೇಷಣೆ
* ಯೋಗೇಶ್ವರ್ ಕೈ ಹಿಡಿದ ಮುಸ್ಲಿಂ ಮತ
* ಯೋಗೇಶ್ವರ್ ಕೈ ಹಿಡಿದ `ಪಟ್ಟಣ’ದ ಮತ
* ಒಕ್ಕಲಿಗ ಮತ ವಿಭಜನೆ- ನಿಖಿಲ್ ಸೋಲು
* ಯೋಗೇಶ್ವರ್ ಕೈ ಹಿಡಿದ `ಗೃಹಲಕ್ಷ್ಮಿ’ಯರ `ಶಕ್ತಿ’
* ಸಿಪಿವೈ ವೈಯಕ್ತಿಕ ವರ್ಚಸ್ಸು – 2 ಸೋಲಿನ ಅನುಕಂಪ
* ಬಿಜೆಪಿಯ `ವಕ್ಫ್’ ವಿರೋಧಿ ನೀತಿ-ನಿಖಿಲ್‌ಗೆ ಹೊಡೆತ
* ಕಾಂಗ್ರೆಸ್‌ಗೆ ಪ್ಲಸ್ ಆದ ಜಮೀರ್ ವಿವಾದಿತ ಮಾತು
* ಕೈಗೂಡದ ದೇವೇಗೌಡರು- ಹೆಚ್‌ಡಿಕೆ ರಣತಂತ್ರ
ಶಿಗ್ಗಾಂವಿಯಲ್ಲಿ 3 ದಶಕದ ಬಳಿಕ ʻಕೈʼ ಮೇಲು:
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಶಿಗ್ಗಾಂವಿ ಉಪಚುನಾವಣೆಯಲ್ಲಿ ಎಲ್ಲರ ನಿರೀಕ್ಷೆ ಮೀರಿ ಮತಪ್ರಭುಗಳು ಅಚ್ಚರಿಯ ತೀರ್ಪು ನೀಡಿದ್ದಾರೆ. ಬಿಜೆಪಿಯ ಭದ್ರಕೋಟೆ ಛಿದ್ರವಾಗಿದೆ. 1994ರ ಬಳಿಕ ಇದೇ ಮೊದಲ ಬಾರಿಗೆ ಶಿಗ್ಗಾಂವಿ ಕಾಂಗ್ರೆಸ್ ಕೈ ಹಿಡಿದಿದೆ. ತಾವೇ ಕಟ್ಟಿರುವ ಕೋಟೆಯಲ್ಲಿ ಮಗನನ್ನು ಪ್ರತಿಷ್ಠಾಪಿಸಲು ಬೊಮ್ಮಾಯಿ ವಿಫಲರಾಗಿದ್ದಾರೆ. ಜನಾದೇಶ ಭರತ್ ಬೊಮ್ಮಾಯಿ ವಿರುದ್ಧ ಬಂದಿದೆ. ಮೊದಲ 7 ಸುತ್ತಿನವರೆಗೆ ಭರತ್ ಬೊಮ್ಮಾಯಿ ಲೀಡ್‌ನಲ್ಲಿದ್ದರು. ಆದ್ರೆ 8ನೇ ಸುತ್ತಿನ ನಂತ್ರ ಚಿತ್ರಣ ಬದಲಾಯ್ತು. ಅಂತಿಮವಾಗಿ ಕಾಂಗ್ರೆಸ್ ಜನಾದೇಶ ಕಾಂಗ್ರೆಸ್ ಪರ ಬಂತು. ಪರಿಣಾಮ ಯಾಸೀರ್ ಪಠಾಣ್ ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡ್ತಿದ್ದಾರೆ. ಕಾಂಗ್ರೆಸ್ ಹಣ ಹರಿಸಿದ್ದು, ಮುಸ್ಲಿಮರು, ಕುರುಬರು ಕಾಂಗ್ರೆಸ್ ಪರ ನಿಂತಿದ್ದು ನಮ್ಮ ಸೋಲಿಗೆ ಕಾರಣ ಎಂದು ಬಿಜೆಪಿ ಆರೋಪಿಸಿದೆ. ನಾನು ಡಿಸಿಎಂ ಅಲ್ದೇ ಇದ್ರೂ ಗೆಲ್ಸಿದ್ದೀನಿ ನೋಡಿ ಎನ್ನುತ್ತಾ ಡಿಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಟವೆಲ್ ಹಾಕಿದ್ದಾರೆ. ಬೆಳಗಾವಿಯಲ್ಲಿ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಘೋಷಣೆ ಮೊಳಗಿವೆ.
ಶಿಗ್ಗಾಂವಿ ಫಲಿತಾಂಶ ಹೇಗಿದೆ?
* ಯಾಸೀರ್ ಪಠಾಣ್ – ಕಾಂಗ್ರೆಸ್ – ಗೆಲುವು – 1,00,756 ಮತ
* ಭರತ್ ಬೊಮ್ಮಾಯಿ – ಬಿಜೆಪಿ – ಸೋಲು – 87,308 ಮತ
* ಕಾಂಗ್ರೆಸ್ ಗೆಲುವಿನ ಅಂತರ – 13,448 ಮತ
ಶಿಗ್ಗಾಂವಿ ರಿಸಲ್ಟ್ ಟ್ರೆಂಡ್ಸ್ ಹೇಗಿತ್ತು?
* 1ನೇ ಸುತ್ತು – ಭರತ್‌ಗೆ 325 ಮತಗಳ ಮುನ್ನಡೆ
* 7ನೇ ಸುತ್ತು – ಭರತ್‌ಗೆ 998 ಮತಗಳ ಮುನ್ನಡೆ
* 8ನೇ ಸುತ್ತು – ಯಾಸೀರ್‌ಗೆ 1158 ಮತಗಳ ಮುನ್ನಡೆ
* 18ನೇ ಸುತ್ತು – ಯಾಸೀರ್‌ಗೆ 13,448 ಮತಗಳ ಗೆಲುವು
ಶಿಗ್ಗಾಂವಿ ಫಲಿತಾಂಶ ವಿಶ್ಲೇಷಣೆ
* ಕಾಂಗ್ರೆಸ್ ಕೈಹಿಡಿದ ಅಹಿಂದ ಮತ
* ಕುರುಬ, ಮುಸ್ಲಿಂ ಮತ ಚದುರದಂತೆ ಸಿಎಂ ಕಾರ್ಯತಂತ್ರ
* ಯಾಸೀರ್‌ಗೆ ವರವಾದ ಗ್ಯಾರಂಟಿ ಮತ
* ತಳಮಟ್ಟದಲ್ಲಿ ಸತೀಶ್ ಜಾರಕಿಹೊಳಿ ಸಂಘಟನೆ
* ಫಲ ಕೊಡದ ಬೊಮ್ಮಾಯಿ ಕಾರ್ಯತಂತ್ರ
* ಕುಟುಂಬ ರಾಜಕೀಯ ಒಪ್ಪದ ಮತದಾರ
ಸಂಡೂರು ಕ್ಷೇತ್ರಕ್ಕೆ ಮೊದಲ ಮಹಿಳಾ ಶಾಸಕಿ:
ಇನ್ನೂ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು ಸಾಧಿಸಿದ್ದಾರೆ. 19 ಸುತ್ತುಗಳ ಮತ ಎಣಿಕೆಯಲ್ಲಿ ಆರಂಭದಿಂದ ಅನ್ನಪೂರ್ಣ, ಬಂಗಾರು ಹನುಮಂತು ನಡ್ವೆ ತುರುಸಿನ ಪೈಪೋಟಿ ಕಂಡುಬಂದಿತ್ತು. ಆದ್ರೆ 6 ಮತ್ತು 7ನೇ ಸುತ್ತು ಹೊರತು ಪಡಿಸಿದ್ರೆ, ಉಳಿದಂತೆ ಅನ್ನಪೂರ್ಣ ಎಲ್ಲೂ ಹಿನ್ನಡೆ ಕಾಣಲಿಲ್ಲ. ನಿಧಾನಕ್ಕೆ ಮತಗಳ ಅಂತರವನ್ನು ಹೆಚ್ಚಿಸಿಕೊಳ್ಳುತ್ತಾ, ಸುಲಭ ಜಯ ಗಳಿಸಿದ್ರು. ಈ ಮೂಲಕ ಸಂಡೂರಿನಿಂದ ವಿಧಾನಸಭೆ ಪ್ರವೇಶ ಮಾಡ್ತಿರುವ ಮೊದಲ ಮಹಿಳಾ ಶಾಸಕಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾದ್ರು.
ಸಂಡೂರು ಫಲಿತಾಂಶ ಹೇಗಿದೆ?
* ಅನ್ನಪೂರ್ಣ – ಕಾಂಗ್ರೆಸ್ – ಗೆಲುವು – 93,616 ಮತ
* ಬಂಗಾರು ಹನುಮಂತು – ಬಿಜೆಪಿ – ಸೋಲು – 83,967 ಮತ
(ಕಳೆದ ಬಾರಿ ಬಿಜೆಪಿ ಪಡೆದ ಮತ 49,700 )
* ಕಾಂಗ್ರೆಸ್ ಗೆಲುವಿನ ಅಂತರ – 9649 ಮತ
ಸಂಡೂರು ರಿಸಲ್ಟ್ ಟ್ರೆಂಡ್ಸ್ ಹೇಗಿದೆ?
* 1ನೇ ಸುತ್ತು – ಅನ್ನಪೂರ್ಣಗೆ 2,586 ಮತಗಳ ಮುನ್ನಡೆ
* 6ನೇ ಸುತ್ತು – ಬಂಗಾರುಗೆ 262 ಮತಗಳ ಮುನ್ನಡೆ
* 8ನೇ ಸುತ್ತು – ಅನ್ನಪೂರ್ಣಗೆ 33 ಮತಗಳ ಮುನ್ನಡೆ
* 19ನೇ ಸುತ್ತು – ಅನ್ನಪೂರ್ಣಗೆ 9,649 ಮತಗಳ ಗೆಲುವು
ಸಂಡೂರು ಫಲಿತಾಂಶ ವಿಶ್ಲೇಷಣೆ
* ಕಾಂಗ್ರೆಸ್‌ನ ಭದ್ರಕೋಟೆ
* ಸಂಸದ ತುಕಾರಾಂ ಸಾಫ್ಟ್ ಇಮೇಜ್
* ಸಂತೋಷ್ ಲಾಡ್ ಸಂಘಟನೆ
* ಕಾಂಗ್ರೆಸ್ ಕೈಹಿಡಿದ `ಗ್ಯಾರಂಟಿ’
* ಜನಾರ್ದನರೆಡ್ಡಿ ರಣತಂತ್ರ ಫೇಲ್
* ಬಿಜೆಪಿಯಲ್ಲಿ ಹೊಂದಾಣಿಕೆ ಕೊರತೆ
* ಬಂಗಾರು ಹೊರಗಿನವರು ಎಂಬ ಆರೋಪ