ಬೆಂಗಳೂರು: ಫೆಬ್ರವರಿ 10, 11 ಹಾಗೂ 12 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಬರುತ್ತಿರುವ ಬೆನ್ನಲ್ಲೆ ಕಾಂಗ್ರೆಸ್ ನಲ್ಲಿ ಹೊಸ ಸಂಪ್ರದಾಯ ಹುಟ್ಟುಹಾಕಲು ಕೈ ನಾಯಕರು ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಚುನಾವಣೆ ಘೋಷಣೆಗೆ ಮೊದಲೇ ಅಭ್ಯರ್ಥಿಗಳನ್ನ ಘೋಷಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿ ತೆರಳಿದ 15 ದಿನದ ಒಳಗಾಗಿ 150 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಎಐಸಿಸಿ ನಿರ್ಧರಿಸಿದೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಸಂಪ್ರದಾಯಕ್ಕೆ ನಾಂದಿ ಹಾಡಲು ಸ್ವತಃ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದಾಗಿದ್ದಾರೆ ಎಂದು ಹೇಳಲಾಗ್ತಿದೆ. ಶತಾಯಗತಾಯ ಕರ್ನಾಟಕದಲ್ಲಿ ಗೆಲ್ಲಲೇಬೇಕು ಎಂದು ರಾಹುಲ್ ಗಾಂಧಿ ಪಣ ತೊಟ್ಟಿದ್ದು, ಇದರ ಭಾಗವಾಗಿಯೇ ಅಂತಿಮ ಕ್ಷಣದ ಗೊಂದಲಗಳು ಪಕ್ಷಕ್ಕೆ ಮುಳುವಾಗದಂತೆ ನೋಡಿಕೊಳ್ಳಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
74 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ತಡವಾಗಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಆದರೆ 150 ಅಭ್ಯರ್ಥಿಗಳ ಮೊದಲ ಪಟ್ಟಿ ಮಾತ್ರ ಫೆಬ್ರವರಿ ಅಂತ್ಯದೊಳಗೆ ಬಿಡುಗಡೆ ಮಾಡಿ ಕಾಂಗ್ರೆಸ್ ಹೊಸ ಸಂಪ್ರದಾಯ ಹುಟ್ಟುಹಾಕಲು ಮುಂದಾಗಿದೆ. ಈ ಮೂಲಕ ತನ್ನ ಪಕ್ಷದ ಸಂಪ್ರದಾಯ ಮುರಿದರೂ ಪರವಾಗಿಲ್ಲ ಕರ್ನಾಟಕದಲ್ಲಿ ಗೆಲ್ಲಲೇಬೇಕು ಎಂಬ ಹಟಕ್ಕೆ ರಾಹುಲ್ ಗಾಂಧಿ ಬಿದ್ದಂತೆ ಕಾಣುತ್ತಿದೆ.