ಬೆಂಗಳೂರು: ಲೋಕಸಭಾ ಚುನಾವಣೆಯನ್ನು ಮೈತ್ರಿ ಮೂಲಕ ಎದುರಿಸಿದ್ದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ತಮ್ಮ ಮುಖಂಡರೇ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡದ ಕಾರಣ ಅಸಮಾಧಾನದ ಹೊಗೆ ಎದ್ದಿದೆ.
ಹಾಸನ, ಮಂಡ್ಯ, ತುಮಕೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ನೀಡಿರಲಿಲ್ಲ. ಈ ವಿಚಾರವನ್ನು ಗಂಭೀರವಾಗಿ ಸ್ವೀಕರಿಸುವಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್‍ಗೆ ಸಿಎಂ ದೂರು ನೀಡಿದ್ದಾರೆ. ಆದರೆ ಸಿಎಂ ಕುಮಾರಸ್ವಾಮಿ ಅವರ ಈ ದೂರಿಗೆ ಸಾಕ್ಷಿ ಸಮೇತ ಪ್ರತಿ ದೂರು ನೀಡಲು ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
Advertisement
Advertisement
ಕಾಂಗ್ರೆಸ್ ಹೈಕಮಾಂಡ್‍ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ದೂರಿಗೆ ಪ್ರತ್ಯಸ್ತ್ರವಾಗಿ ಸ್ವತಃ ಸಿಎಂ ಅವರಿಗೆ ದೂರು ನೀಡಲು ಕಾಂಗ್ರೆಸ್ ಮುಂದಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕೋಲಾರ, ಮೈಸೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಜೆಡಿಎಸ್ ನಾಯಕರು ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ನೀಡಿರಲಿಲ್ಲ. ಅದರಲ್ಲೂ ಕೋಲಾರದಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರು ಬಹಿರಂಗ ಹೇಳಿಕೆ ನೀಡಿ ಬಿಜೆಪಿಗೆ ಮತ ನೀಡಿ ಎಂದಿದ್ದರು. ಚಿಕ್ಕಬಳ್ಳಾಪುರದಲ್ಲಿ ಮೊದಲು ಹೆಚ್ಚಿನ ಉತ್ಸಾಹದಿಂದಲೇ ಮುಂದಾದ ವೀರಪ್ಪ ಮೊಯ್ಲಿ ಅವರಿಗೆ ಜೆಡಿಎಸ್ ನಾಯಕರ ಬೆಂಬಲ ಲಭಿಸಿರಲಿಲ್ಲ. ಮೈಸೂರಿನಲ್ಲಿ ಈಗಾಗಲೇ ಸಚಿವ ಜಿಡಿ ದೇವೇಗೌಡ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ ವಿಚಾರಗಳನ್ನು ಸಾಕ್ಷಿ ಸಮೇತ ನೀಡಲು ಕೈ ನಾಯಕರು ಮುಂದಾಗಿದ್ದಾರೆ.
Advertisement
Advertisement
ಸಿಎಂ ಕುಮಾರಸ್ವಾಮಿ ಅವರ ಮೇಲೆ ಈ ಮೂಲಕ ಒತ್ತಡ ಹಾಕುವುದು ಕಾಂಗ್ರೆಸ್ ಉದ್ದೇಶವಾಗಿದ್ದು, ಕಾಂಗ್ರೆಸ್ ಪಕ್ಷದಿಂದ ಬಂಡಾಯ ಮುಖಂಡರ ವಿರುದ್ಧ ಕ್ರಮಕೈಗೊಂಡಿರುವ ಪಟ್ಟಿಯೂ ಸಿದ್ಧವಾಗಿದೆ. ಆದರೆ ಇದುವರೆಗೂ ಜೆಡಿಎಸ್ ಪಕ್ಷದಿಂದ ಯಾವುದೇ ಸಣ್ಣ ಕಾರ್ಯಕರ್ತನ ಮೇಲೂ ಕ್ರಮಕೈಗೊಂಡಿರುವ ಉದಾಹಣೆ ಇಲ್ಲ. ಹೀಗಾಗಿ ನಾವು ಯಾಕೆ ನಮ್ಮ ನಾಯಕರ ಮೇಲೆ ಕ್ರಮ ಕೈಗೊಳ್ಳಬೇಕು? ನಮ್ಮ ದೂರಿಗೆ ಸಿಎಂ ಸ್ಪಂದನೆ ಯಾವ ರೀತಿ ಇರುತ್ತದೋ ಅದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತೀರ್ಮಾ ತೆಗೆದುಕೊಳ್ಳವುದು ಸರಿ ಎನ್ನುವ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದಾರೆ ಎನ್ನಲಾಗಿದೆ.