ಬೆಂಗಳೂರು: ಕಾಂಗ್ರೆಸ್ಸಿನವರಿಗೆ ಏನಾದರೂ ತಾಕತ್ತು ಇದ್ದರೆ ಅವರ ಶಾಸಕರು ಹಾಗೂ ಸಚಿವರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲಿ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಡಾಲರ್ಸ್ ಕಾಲೋನಿಯ ಬಿಎಎಸ್‍ವೈ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದ ಆಂತರಿಕ ಕಿತ್ತಾಟವನ್ನು ಬಿಜೆಪಿ ಮೇಲೆ ಹೇರುವ ಪ್ರಯತ್ನವನ್ನು ಕಾಂಗ್ರೆಸ್ಸಿನವರು ಮಾಡುತ್ತಿದ್ದಾರೆ. ಅವರಿಗೇನಾದರೂ ತಾಕತ್ತು ಇದ್ದರೆ ತಮ್ಮ ತಮ್ಮ ಶಾಸಕರು ಹಾಗೂ ಸಚಿವರನ್ನು ಹತೋಟಿಯಲ್ಲಿ ಹಿಡಿದಿಟ್ಟುಕೊಳ್ಳಬೇಕು. ಅದನ್ನು ಬಿಟ್ಟು ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಪರಸ್ಪರ ಕಿತ್ತಾಡಿಕೊಂಡು, ಬಿಜೆಪಿ ಮೇಲೆ ಹೇರುವ ತಮ್ಮ ಹತಾಶೆ ಭಾವನೆಯನ್ನು ಬಿಡಿ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಈ ವೇಳೆ ಡಿಕೆ ಶಿವಕುಮಾರ್ ಹೇಳಿದ್ದ ಕಿವಿ ಮೇಲೆ ಹೂ ಇಟ್ಟುಕೊಂಡು ಬಂದಿಲ್ಲ ಅನ್ನುವ ಹೇಳಿಕೆಗೆ ತಿರುಗೇಟು ನೀಡಿದ ಅವರು, ಶಿವಕುಮಾರ್ ಹೇಗೆ ಕಿವಿ ಮೇಲೆ ಹೂ ಇಟ್ಕೊಂಡು ಬೆಂಗಳೂರಿಗೆ ಬಂದಿಲ್ವೋ, ಅದೇ ರೀತಿ ಯಾರೂ ಕೂಡ ಹೂ ಇಟ್ಕೊಂಡು ಬೆಂಗಳೂರಿಗೆ ಬಂದಿಲ್ಲ. ಯಡಿಯೂರಪ್ಪನವರು ಕಳೆದ 40 ವರ್ಷಗಳಿಂದ ಬೆಂಗಳೂರಿನಲ್ಲಿದ್ದುಕೊಂಡೆ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ಆಂತರಿಕ ಕಿತ್ತಾಟವನ್ನು ತಪ್ಪಿಸಿಕೊಳ್ಳಲು ಹೀಗೆ ಬೇರೊಬ್ಬರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಮಾಡಿಲ್ಲ, ಕಳ್ಳನಂತೆ ಓಡಿಹೋಗಲ್ಲ-ಸಚಿವ ಡಿಕೆಶಿ
ಪ್ರಧಾನ ಮಂತ್ರಿ ಕಚೇರಿಯು ಆದಾಯ ತೆರಿಗೆ(ಐಟಿ) ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಭೆಯಲ್ಲಿ ಪ್ರಧಾನಿಯೊಂದಿಗೆ ಚರ್ಚಿಸುತ್ತೇವೆ ಎನ್ನುವ ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರು ಬೇಕಾದರೂ ಹೋಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿ. ಐಟಿ ಹಾಗೂ ಇಡಿ ಇಲಾಖೆ ಕಾರ್ಯಗಳೊಂದಿಗೆ ಅವರು ಯಾವುದೇ ಸಂಬಂಧ ಹೊಂದಿಲ್ಲವೆಂದು ಉತ್ತರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv