– ಬಿಜೆಪಿ ಬಳಸಿದ್ದ ಅಸ್ತ್ರ ಬಳಸಿ ಕಾಂಗ್ರೆಸ್ ಕೌಂಟರ್
– ರಾಜಸ್ಥಾನ ಉಪಚುನಾವಣೆ ಬಳಸಿ ಯಶಸ್ವಿಯಾಗಿದ್ದ ಕಾಂಗ್ರೆಸ್
ಬೆಂಗಳೂರು: ವಿಧಾನಸಭೆ ಮತ್ತು ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಸೂಪರ್ ಟೀಮ್ 139 ಫಾರ್ಮುಲಾ ಬಳಕೆ ಮಾಡಲಿದೆ. ದೇಶದ ನಾನಾ ಕಡೆಗಳಲ್ಲಿ ಬಿಜೆಪಿ ಪ್ರಯೋಗಿಸಿದ್ದ ಅಸ್ತ್ರವನ್ನೇ ಉಪಕದನದಲ್ಲಿ ಬಳಸಿಕೊಳ್ಳಲು ಮುಂದಾಗಿದೆ.
ಬಿಜೆಪಿ ನಾಯಕರು ನಿರೀಕ್ಷೆ ಮಾಡಲು ಸಾಧ್ಯವಾಗದ ರೀತಿಯಲ್ಲಿ ಕಾಂಗ್ರೆಸ್ ಕೌಂಟರ್ ಕೊಡಲು ಸಿದ್ಧವಾಗಿದೆ. ಇಡೀ ಕಾರ್ಯಾಚರಣೆಯ ರೂಪುರೇಷವನ್ನ ಖುದ್ದಾಗಿ ಎಐಸಿಸಿ (ಹೈಕಮಾಂಡ್) ನೇತೃತ್ವದಲ್ಲಿ ನಡೆಯಲಿದೆ. ವಿಶೇಷವಾಗಿ ಬಳ್ಳಾರಿ ಸೇರಿದಂತೆ ಎಲ್ಲ ಕ್ಷೇತ್ರಗಳಿಗೆ ರಚಿತವಾಗಿರುವ ಸೂಪರ್ ಟೀಮ್ ಫಾರ್ಮುಲಾವನ್ನು ಈ ಹಿಂದೆ ರಾಜಸ್ಥಾನದ ಉಪ ಚುನಾವಣೆಯಲ್ಲಿಯೂ ಕಾಂಗ್ರೆಸ್ ಬಳಸಿಕೊಂಡು ಯಶಸ್ವಿಯಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಭದ್ರಕೋಟೆಯನ್ನು ಕೈ ವಶ ಮಾಡಿಕೊಳ್ಳಲು ರಾಜ್ಯದಲ್ಲಿ ಹೊಸ ತಂತ್ರದ ಮೊರೆ ಹೋಗಿದೆ.
Advertisement
ಏನಿದು ಸೂಪರ್ ಟೀಮ್ ಫಾರ್ಮುಲಾ?
1. ಬಳ್ಳಾರಿ
ಬಳ್ಳಾರಿ ಅಭ್ಯರ್ಥಿ ಗೊಂದಲ ಅಲ್ಲಿನ ಶಾಸಕರಲ್ಲೇ ಬಿರುಕು ಮೂಡಿಸಿತ್ತು. ಈ ಅಸಮಧಾನದ ನಡುವೆಯೆ ಶಾಸಕ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಸಹೋದರ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿತ್ತು. ಎಲ್ಲ ಬೆಳವಣಿಗೆಯನ್ನು ಚಾಚು ತಪ್ಪದೆ ಗಮನಿಸುತ್ತಿದ್ದ ಕಾಂಗ್ರೆಸ್ ಹೈಕಮಾಂಡ್ ಗೆಲುವಿಗೆ ಪೂರಕವಾಗುವಂತ ವ್ಯವಸ್ಥಿತ ದಾಳವನ್ನು ಸಮಯ ನೋಡಿ ಉರುಳಿಸಿದೆ. ಎಂಎಲ್‍ಸಿ ಉಗ್ರಪ್ಪರ ಹೆಸರನ್ನು ಸೂಚಿಸುವ ಮೂಲಕ ಶಾಸಕರ ನಡುವಿನ ಭಿನ್ನಾಭಿಪ್ರಾಯ ತೊಡೆದು ಹಾಕಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂಬ ಸಂದೇಶ ರವಾನಿಸಿದೆ. ಪಕ್ಷದ ಸಚಿವರು ಹಾಗೂ ಶಾಸಕರು ಸೇರಿ ಒಟ್ಟು 63 ಮಂದಿಗೆ ಜವಬ್ದಾರಿ ನೀಡಿ, ಬಿಜೆಪಿಯ ಭದ್ರಕೋಟೆ ಜನಾರ್ದನ ರೆಡ್ಡಿ ಮತ್ತು ರಾಮುಲು ಕೋಟೆಯನ್ನು ಈ ಬಾರಿ ಬೇಧಿಸಲೇಬೇಕೆಂದು ಸೂಚಿಸಿದೆ.
Advertisement
Advertisement
ಬಳ್ಳಾರಿಯಲ್ಲಿ ತಲಾ ಹೋಬಳಿಗೆ ಓರ್ವ ಶಾಸಕರಂತೆ ಒಟ್ಟು 52 ಜನ ಶಾಸಕರು ಹಾಗೂ ಪರಿಷತ್ ಸದಸ್ಯರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಎಂಟು ವಿಧಾನಸಭಾ ಕ್ಷೇತ್ರಗಳಿಗೆ ತಲಾ ಓರ್ವ ಸಚಿವರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದ್ದು, ಎಂಟು ಸಚಿವರುಗಳು ಒಂದೊಂದು ಕ್ಷೇತ್ರದ ಉಸ್ತುವಾರಿ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಹೀಗೆ ಇಡೀ ಬಳ್ಳಾರಿ ಬಿಜೆಪಿ ಕೋಟೆಯನ್ನ ಒಡೆಯಲು ಸೂಪರ್ ಟೀಮ್ ಫಾರ್ಮುಲಾ 63 ಯನ್ನ ಕಾಂಗ್ರೆಸ್ ಪ್ರಯೋಗಿಸಲು ಮುಂದಾಗಿದೆ. ಈ ಟೀಮ್ ಗೆ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ನಾಯಕನಾಗಿ ನೇಮಿಸಲಾಗಿದೆ. ದೇಶದ ನಾನಾ ಕಡೆ ಬಿಜೆಪಿ ಮಾಡಿದ ತಂತ್ರಗಾರಿಕೆಯನ್ನೆ ಕಾಂಗ್ರೆಸ್ ಈಗ ಮಾಡಲು ಮುಂದಾಗಿದೆ.
Advertisement
2. ಜಮಖಂಡಿ:
ಜಮಖಂಡಿ ವಿಧಾನ ಸಭಾ ಉಪ ಚುನಾವಣೆಯ ಉಸ್ತುವಾರಿಯನ್ನು ಡಿಸಿಎಂ ಪರಮೇಶ್ವರ್ ಅವರಿಗೆ ಉಸ್ತುವಾರಿ ನೀಡಲಾಗಿದೆ. ಇಲ್ಲಿ ಸೂಪರ್ ಟೀಮ್ ಫಾರ್ಮುಲ ನಂಬರ್ 43 ಕಾಂಗ್ರೆಸ್ ನ ಮಾಸ್ಟರ್ ಸ್ಟ್ರೋಕ್. ಜಮಖಂಡಿಗೆ ನಾಲ್ವರು ಜಂಟಿ ಚುನಾವಣಾ ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಚಿವ ಶಿವಾನಂದ ಪಾಟೀಲ್, ಮಾಜಿ ಸಚಿವ ಎಂ.ಬಿ ಪಾಟೀಲ್, ಎಸ್ ಆರ್ ಪಾಟೀಲ್ ನಾಲ್ವರು ಜಂಟಿ ಉಸ್ತುವಾರಿಗಳು ನಾಯಕರು, ಪ್ರತಿ ಪಂಚಾಯತಿಗೆ ಒಬ್ಬರಂತೆ 38 ಬೇರೆ ಬೇರೆ ಮುಖಂಡರುಗಳ ನೇಮಕ ಮಾಡಿ ಜಮಖಂಡಿಗೆ ಸೂಪರ್ ಟೀಮ್ ಫಾರ್ಮುಲಾ 43 ಪ್ರಯೋಗಿಸಲಾಗಿದೆ.
3. ಮಂಡ್ಯ:
ಮಂಡ್ಯದಲ್ಲಿ ಕಾಂಗ್ರೆಸ್ ಸೂಪರ್ ಟೀಮ್ ಫಾರ್ಮುಲಾ 18 ಅಪ್ಲೈ ಮಾಡಲಾಗಿದೆ. ಇನ್ನು ಸ್ಪರ್ಧಿಸಲು ಸೂಕ್ತ ಅಭ್ಯರ್ಥಿ ಇಲ್ಲದೇ ಶಿವಮೊಗ್ಗದಲ್ಲಿ ಜೆಡಿಎಸ್ ಗೆ ಸ್ಥಾನ ಬಿಟ್ಟುಕೊಟ್ಟಿರುವ ಕಾಂಗ್ರೆಸ್ ಅಲ್ಲಿಯೂ ಸೂಪರ್ ಟೀಮ್ ಫಾರ್ಮುಲಾ 14 ಪ್ರಯೋಗಿಸಿದೆ. ಹಿರಿಯ ಸಚಿವ ಆರ್.ವಿ.ದೇಶಪಾಂಡೆ ಉಸ್ತುವಾರಿ ಹಾಗೂ ಸಚಿವೆ ಜಯಮಾಲ ಸಹಾ ಉಸ್ತುವಾರಿಯಾಗಿರುವ ಕ್ಷೇತ್ರದಲ್ಲಿ ಇಬ್ಬರಿಗೂ ಜಾತಿ ಮತ ಸೆಳೆಯುವ ಜವಬ್ದಾರಿಯಾದ್ರೆ, ಉಳಿದ 12 ಜನರಿಗೆ ಕ್ಷೇತ್ರವಾರು ಜವಾಬ್ದಾರಿ ಹಾಗೂ ತಾಲೂಕು ಮಟ್ಟದಲ್ಲಿ ಪ್ರವಾಸದ ಜವಾಬ್ದಾರಿ ಹಂಚಲಾಗಿದೆ.
4. ಶಿವಮೊಗ್ಗ:
ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆ ಮಾಡದಿದ್ದರೂ ಬಿಎಸ್ ವೈ ಮಣಿಸಲು ಜೆಡಿಎಸ್ ಬೆಂಬಲಕ್ಕೆ ಕಾಂಗ್ರೆಸ್ ಟೀಂ ಸಿದ್ಧವಾಗಿದ್ದು, ಇಲ್ಲಿ ಸೂಪರ್ ಟೀಂ ಫಾರ್ಮುಲಾ 13 ಪ್ರಯೋಗಿಸಲಾಗಿದೆ.
5. ರಾಮನಗರ:
ಜೆಡಿಎಸ್ ನ ಭದ್ರಕೋಟೆ ರಾಮನಗರದಲ್ಲೂ ಕಾಂಗ್ರೆಸ್ ಸೂಪರ್ ಟೀಮ್ ಫಾರ್ಮುಲಾ 2 ಪ್ರಯೋಗ ಮಾಡಿದೆ. ಸಂಸದ ಡಿ.ಕೆ.ಸುರೇಶ್ ರಾಮನಗರ ವಿಧಾನಸಭಾ ಕ್ಣೇತ್ರದ ಉಸ್ತುವಾರಿಯಾದರೆ, ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಸಹಾ ಉಸ್ತುವಾರಿಯಾಗಿದ್ದಾರೆ. ರಾಮನಗರದ ನೆಲದಲ್ಲಿ ತಮ್ಮ ಪಾರಂಪರಿಕ ಎದುರಾಳಿ ಜೆಡಿಎಸ್ ಪರವಾಗಿ ಕಾಂಗ್ರೆಸ್ ಘಟಾನುಘಟಿಗಳು ಕೆಲಸ ಮಾಡಬೇಕಾಗಿದೆ.
ಹೀಗೆ ಈ ಬಾರಿಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಯ ಸೂಪರ್ ಟೀಮ್ ಫಾರ್ಮುಲಾವನ್ನೆ ಮುಂದಿಟ್ಟುಕೊಂಡು ರಣರಂಗಕ್ಕೆ ಇಳಿದಿದೆ. ಕಾಂಗ್ರೆಸ್ ನ ಸೂಪರ್ ಟೀಮ್ ಫಾರ್ಮುಲ 139 ಕಾಂಗ್ರೆಸ್ ನ ಕೈ ಹಿಡಿಯುತ್ತಾ ಅಥವಾ ಕೈ ಚೆಲ್ಲುತ್ತಾ ಎಂಬುದರ ಬಗ್ಗೆ ರಾಜ್ಯ ರಾಜಕರಣದಲ್ಲಿ ಬಿಸಿ ಬಿಸಿ ಚರ್ಚೆಯಂತು ನಡೆಯುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv