ಬೆಂಗಳೂರು: ರಾಜ್ಯದಲ್ಲಿ ಎಲೆಕ್ಷನ್ ಫಿವರ್ ಶುರುವಾಗಿದ್ದು, ರಾಜಕೀಯ ಪಕ್ಷಗಳು ನಾ ಮುಂದು ತಾ ಮುಂದು ಅಂತಾ ತಂತ್ರ-ರಣತಂತ್ರಗಳು ಹೂಡುತ್ತಿವೆ. ಈಗ ಬಿಜೆಪಿ ಮಾಡುತ್ತಿರುವ ಚುನಾವಣಾ ತಂತ್ರಗಳಿಗೆ ಪ್ರತಿ ತಂತ್ರಗಳನ್ನು ಹೂಡಲು ಕಾಂಗ್ರೆಸ್ ಸಜ್ಜಾಗಿದೆ ಎಂದು ತಿಳಿದುಬಂದಿದೆ.
ಗುಜರಾತ್ ಚುನಾವಣೆ ಬಳಿಕ ಗೆಲುವಿನ ಹುಮ್ಮಸ್ಸಿನಲ್ಲಿರುವ ಬಿಜೆಪಿ ನಾಯಕರು ಕರ್ನಾಟಕದ ಚುನಾವಣೆಯ ಮೇಲೆ ಕಣ್ಣಿರಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಲ್ಲಿ ವಾಸ್ತವ್ಯ ಹೂಡಲಿದ್ದು, ಏರ್ ಪೋರ್ಟ್ ರಸ್ತೆಯಲ್ಲಿ ಬೃಹತ್ ವಿಲ್ಲಾವನ್ನು ಬಾಡಿಗೆ ಪಡೆದಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದುಬಂದಿತ್ತು. ಇತ್ತ ಕಾಂಗ್ರಸ್ ಕೂಡ ಬೆಂಗಳೂರಿನಲ್ಲಿ ವಾರ್ ರೂಂ ಸ್ಥಾಪಿಸಲು ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ.
Advertisement
Advertisement
ಏನಿದು ವಾರ್ ರೂಂ?: ರಾಜ್ಯ ರಾಜಕಾರಣದ ಮತ್ತು ಕಾಂಗ್ರೆಸ್ ನ ಗುಪ್ತ ಸಭೆಗಳನ್ನು ನಡೆಸಲು ಒಂದು ಕಟ್ಟಡವನ್ನು ಬಾಡಿಗೆಗೆ ಪಡೆದುಕೊಳ್ಳಲಾಗುತ್ತದೆ. ಈ ಕಟ್ಟಡದಲ್ಲಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಲಿದ್ದು, ವಿರೋಧ ಪಕ್ಷಗಳನ್ನು ಸದೆಬಡಿಯಲು ರಾಜಕೀಯ ರೂಪುರೇಷಗಳನ್ನು ಸಿದ್ಧಪಡಿಸಲಾಗುತ್ತದೆ. ಜನವರಿ ಮೊದಲ ವಾರದಲ್ಲಿಯೇ ರಾಜ್ಯದಲ್ಲಿ ವಾರ್ ರೂಂ ಸ್ಥಾಪನೆಯಾಗಲಿದೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.
Advertisement
ಸರ್ವೆ ಮೂಲಕ ಟಿಕೆಟ್ ಹಂಚಿಕೆ: ರಾಜ್ಯದಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಗಾಗಲೇ ಮೂರು ಸರ್ವೆ ಮಾಡಿಸಿದ್ದಾರೆ ಎನ್ನಲಾಗಿದೆ. ಈ ಸರ್ವೆ ಮೂಲಕ ಟಿಕೆಟ್ ಹಂಚಿಕೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಎರಡು ಏಜೆನ್ಸಿ ಸರ್ವೆಗಳು, ಒಂದು ಗುಪ್ತಚರ ಇಲಾಖೆ ಸರ್ವೆಯ ಆಧಾರದಲ್ಲಿ ಯಾವ ಕ್ಷೇತ್ರಗಳಲ್ಲಿ ಯಾರು ಪ್ರಬಲ ನಾಯಕರು ಎಂಬುದನ್ನು ತೀರ್ಮಾನಿಸಲಾಗುತ್ತದೆ.
Advertisement
ಇನ್ನೂ ಚುನಾವಣೆಗಳಲ್ಲಿ ಮೂರು ಬಾರಿ ಸೋತವರಿಗೆ ಟಿಕೆಟ್ ನೀಡದಿರಲು ಯೋಚನೆ ಮಾಡಲಾಗುತ್ತಿದೆ. ಕಳೆದ ಬಾರಿ 10 ಸಾವಿರ ಮತಗಳ ಅಂತರದಿಂದ ಸೋಲು ಕಂಡಿರುವ ನಾಯಕರಿಗೂ ಟಿಕೆಟ್ ಸಿಗುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದ್ದು, ಈ ಬಾರಿ ಟಿಕೆಟ್ ನೀಡುವ ವಿಚಾರದಲ್ಲಿ ರಾಹುಲ್ ಗಾಂಧಿ ಯಾವುದೇ ರಾಜಿಗಳಿಗೆ ಸಿದ್ಧರಿಲ್ಲ ಅಂತಾ ರಾಜಕೀಯ ಮೂಲಗಳು ತಿಳಿಸಿವೆ.