ಜೈಪುರ್: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ (Indira Gandhi) ಬಗ್ಗೆ ಸಚಿವರ ಹೇಳಿಕೆ ಖಂಡಿಸಿ ಹಾಗೂ ಅದನ್ನು ವಿರೋಧಿಸಿ ಪ್ರತಿಭಟಿಸಿದ್ದ ಆರು ಕಾಂಗ್ರೆಸ್ ಶಾಸಕರ ಅಮಾನತು ವಿರೋಧಿಸಿ ರಾಜಸ್ಥಾನ (Rajasthan) ವಿಧಾನಸಭೆಯ ಹೊರಗೆ ಕಾಂಗ್ರೆಸ್ (Congress) ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಬಗ್ಗೆ ಸಚಿವ ಅವಿನಾಶ್ ಗೆಹ್ಲೋಟ್ (Avinash Gehlot) ನೀಡಿದ ಹೇಳಿಕೆಯನ್ನು ವಿರೋಧಿಸಿ, ಕಾಂಗ್ರೆಸ್ ಕಾರ್ಯಕರ್ತರು ರಾಜಸ್ಥಾನ ವಿಧಾನಸಭೆಯ ಹೊರಗೆ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ, ಪ್ರತಿಭಟನಾಕಾರರು ವಿಧಾನಸಭೆ ಆವರಣದ ಕಡೆಗೆ ಮೆರವಣಿಗೆ ನಡೆಸದಂತೆ ಬ್ಯಾರಿಕೇಡ್‌ಗಳನ್ನು ಹಾಕಿ ತಡೆದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದವರಲ್ಲಿ ಸಂಸದ ಹರೀಶ್ ಮೀನಾ, ಮುರಾರಿ ಮೀನಾ ಮತ್ತು ಮಾಜಿ ಸಚಿವ ಬಿಡಿ ಕಲ್ಲಾ ಸೇರಿದಂತೆ ಇತರ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಸೇರಿದ್ದರು.
Advertisement
Advertisement
ಕಳೆದ ಶುಕ್ರವಾರ ಗೆಹ್ಲೋಟ್ ಅವರ ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದು ಕಾಂಗ್ರೆಸ್ ನಾಯಕರು ವಿಧಾನಸಭೆಯೊಳಗೆ ಧರಣಿ ನಡೆಸಲು ಕಾರಣವಾಯಿತು. ಇನ್ನೂ ಈ ಹೇಳಿಕೆ ಮತ್ತು ಆರು ಕಾಂಗ್ರೆಸ್ ಶಾಸಕರ ಅಮಾನತು ವಿರೋಧಿಸಿ ನಡೆದ ಪ್ರತಿಭಟನೆಗಳಿಂದಾಗಿ ರಾಜಸ್ಥಾನ ವಿಧಾನಸಭೆಯಲ್ಲಿ ಇಂದು ಸಹ (ಫೆ.24) ಗದ್ದಲ ಮುಂದುವರಿದಿತ್ತು.
Advertisement
Advertisement
ಶುಕ್ರವಾರದ ಪ್ರಶ್ನೋತ್ತರ ಅವಧಿಯಲ್ಲಿ, ಗೆಹ್ಲೋಟ್ ವಿರೋಧ ಪಕ್ಷದತ್ತ ಬೊಟ್ಟು ಮಾಡಿ, “ನೀವು 2023-24ರ ಬಜೆಟ್‌ನಲ್ಲಿ ಮಹಿಳೆಯರ ಹಾಸ್ಟೆಲ್ ಯೋಜನೆಗೆ ನಿಮ್ಮ ʻಅಜ್ಜಿʼ ಇಂದಿರಾ ಗಾಂಧಿಯವರ ಹೆಸರನ್ನು ಇಟ್ಟಿದ್ದೀರಿ, ನೀವು ಯಾವಾಗಲೂ ಹೀಗೆ” ಎಂದು ಟೀಕಿಸಿದ್ದರು. ಈ ಹೇಳಿಕೆಯಿಂದ ಸದನದಲ್ಲಿ ಕೋಲಾಹಲ ಉಂಟಾಗಿ, ಮೂರು ಬಾರಿ ಕಲಾಪ ಮುಂದೂಡಲ್ಪಟ್ಟಿತು. ಈ ವೇಳೆ ಉಂಟಾದ ಗದ್ದಲದ ಪರಿಣಾಮ ಪಿಸಿಸಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋಟಸಾರ ಸೇರಿದಂತೆ ಆರು ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸಲಾಗಿತ್ತು.
ಸೋಮವಾರ, ಅಮಾನತುಗೊಂಡ ಶಾಸಕರನ್ನು ಹೊರಹೋಗುವಂತೆ ಸ್ಪೀಕರ್ ಕೇಳಿಕೊಂಡರು, ಆದರೆ ಅವರು ನಿರಾಕರಿಸಿದ್ದರಿಂದ ಹಲವು ಬಾರಿ ಕಲಾಪ ಮುಂದೂಡಲಾಯಿತು. ಅಮಾನತುಗೊಂಡ ಸದಸ್ಯರನ್ನು ಹೊರಹಾಕಲು ಮಾರ್ಷಲ್‌ಗಳನ್ನು ಕರೆಸಲಾಗಿತ್ತು.