ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಸುಧಾಕರ್ ನ ಜೈಲಿಗೆ ಕಳಿಹಿಸುವವರೆಗೂ ಕಾಂಗ್ರೆಸ್ ನವರು ನಿದ್ದೆ ಮಾಡಬಾರದು ಎಂದು ಗೌರಿಬಿದನೂರು ಕಾಂಗ್ರೆಸ್ ಶಾಸಕ ಎನ್‍ಎಚ್ ಶಿವಶಂಕರರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಅನರ್ಹ ಶಾಸಕ ಸುಧಾಕರ್ ವಿರುದ್ಧ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಿವಶಂಕರರೆಡ್ಡಿ, ಅನರ್ಹ ಶಾಸಕ ಸುಧಾಕರ್ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಿದ್ದು, ಜಲ್ಲಿ ಕ್ರಷರ್ ಮಾಲೀಕರ ಬಳಿ ಮಂತ್ಲಿ ಮಾಮೂಲಿ ವಸೂಲಿ ಮಾಡಿದ್ದಾರೆ ಎಂದರು.
ಇತ್ತೀಚೆಗೆ ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಪ್ರಾಧಿಕಾರದ ಮೇಲೆ ನಡೆದ ಎಸಿಬಿ ದಾಳಿಯಲ್ಲಿ ಶಾಸಕರಿಗೂ 5 ಲಕ್ಷ ಲಂಚ ಕೊಡಬೇಕು ಎನ್ನುವ ವಿಚಾರ ಎಸಿಬಿ ದಾಖಲಿಸಿ ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಅನರ್ಹ ಶಾಸಕ ಸುಧಾಕರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿ ಜೈಲಿಗೆ ಕಳುಹಿಸಬೇಕು. ಅಲ್ಲಿಯವರೆಗೂ ಕಾಂಗ್ರೆಸ್ ಕಾರ್ಯಕರ್ತರು ನಿದ್ದೆ ಮಾಡಬಾರದು ಆತನನ್ನು ಮುಂದಿನ ಚುನಾವಣೆಯಲ್ಲಿ ಮನೆಗೆ ಕಳುಹಿಸುವ ಕೆಲಸ ಮಾಡಬೇಕು ಎಂದು ಶಿವಶಂಕರರೆಡ್ಡಿ ಕರೆ ಕೊಟ್ಟರು.
ನಗರದ ಓಕ್ಕಲಿಗರ ಕಲ್ಯಾಣ ಮಂಟಪದಿಂದ ಬಿಬಿ ರಸ್ತೆ ಮೂಲಕ ಶಿಡ್ಲಘಟ್ಟ ವೃತ್ತದವರೆಗೂ ಮೆರವಣಿಗೆ ಮೂಲಕ ಸಾಗಿ ಬಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು.