ಮಲ್ಲಿಕಾರ್ಜುನ ಖರ್ಗೆ ರಾಜಕೀಯವಾಗಿ ಆರಿದ ದೀಪ: ನಳಿನ್ ಕುಮಾರ್

Public TV
2 Min Read
CTD 4

– ದೇವೇಗೌಡ್ರು, ಸಿದ್ದರಾಮಯ್ಯಗೂ ಟಾಂಗ್

ಚಿತ್ರದುರ್ಗ: ಪ್ರಧಾನಿ ಮೋದಿಯವರು ಸಾಧನೆ ಮೂಲಕ ಜಗತ್ತಿಗೆ ಪ್ರಕಾಶಮಾನವಾದ ಬೆಳಕು ನೀಡುತ್ತಿದ್ದಾರೆ. ಮೋದಿಯವರು 1000 ವೋಲ್ಟಿನ ಹ್ಯಾಲೋಜೆನ್ ಲೈಟ್. ಖರ್ಗೆಯವರು ರಾಜಕೀಯವಾಗಿ ಆರಿದ ದೀಪ ಎಂದು ಹೇಳುವ ಮೂಲಕ ಅವರು ಕತ್ತಲಲ್ಲಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡುತ್ತಾ ಮೋದಿ ಜೀರೋ ಕ್ಯಾಂಡಲ್ ಬಲ್ಬ್, ಬೆಳಕು ಕೊಡಲ್ಲ ಎಂಬ ಕಾಂಗ್ರೆಸ್ ಮುಖಂಡ ಖರ್ಗೆ ಮಾತಿಗೆ ತಿರುಗೇಟು ನೀಡಿದ್ದಾರೆ. ಚುನಾವಣೆಯಲ್ಲಿ ಸೋತು ದುಃಖದಲ್ಲಿ ಆ ಮಾತನಾಡಿದ್ದಾರೆ. ಕಾಂಗ್ರೆಸ್ಸಿನವರು ಖರ್ಗೆಯನ್ನು ಕನಿಷ್ಟ ರಾಜ್ಯಸಭೆ, ವಿಧಾನಸಪರಿಷತ್‍ಗೂ ಕಳುಹಿಸಲಿಲ್ಲ. ಹೀಗಾಗಿ ಖರ್ಗೆ ಈ ರೀತಿ ಮೋದಿಯವರ ಬಗ್ಗೆ ಮಾತನಾಡ್ತಿದ್ದಾರೆ ಎಂದರು.

CTD NALIN

ಇದೇ ವೇಳೆ ಸಂವಿಧಾನ ವಿರೋಧಿ ಕೆಲಸವನ್ನು ಬಿಜೆಪಿ ಮಾಡ್ತಿದೆ ಎಂದು ಹೇಳಿರುವ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಗೂ ಪ್ರತಿಕ್ರಿಯಿಸಿದ ಅವರು, ನಮ್ಮ ದೇಶದಲ್ಲಿ ಬ್ರಿಟೀಷರು ಡಿವೈಡ್ ಆ್ಯಂಡ್ ರೂಲ್ ಮಾಡಿದ್ರು. ಈಗ ಅದನ್ನು ಕಾಂಗ್ರೆಸ್ ಮುಂದುವರಿಸಿದೆ.

ಅಧಿಕಾರಕ್ಕಾಗಿ ಕಾಂಗ್ರೆಸ್ ವಂದೇ ಮಾತರಂ ಹಾಗೂ ಪಾಕಿಸ್ತಾನವನ್ನು ಭಾರತದಿಂದ ಇಬ್ಭಾಗ ಮಾಡಿದ್ದ ಕಾಂಗ್ರೆಸ್, ಜನರ ಮತಕ್ಕಾಗಿ ಜಾತಿ ಹಾಗೂ ದೇಶವನ್ನು ಡಿವೈಡ್ ಮಾಡಿದ್ರು ಅಂತ ಆರೋಪಿಸಿದರು. ಹಾಗೆಯೇ ಕಾಂಗ್ರೆಸ್ಸಿನ ಇನ್ನೊಂದು ಮುಖ ಮಾಜಿ ಪ್ರಧಾನಿ ದೇವೇಗೌಡ್ರು ಎಂದು ಆರೋಪ ಮಾಡಿದರು.

HDD 2

ಬ್ರಿಟೀಷ್ ಹಾಗೂ ಕಾಂಗ್ರೆಸ್ ಮಾಡಿದ್ದ ಡಿವೈಡ್ ಆ್ಯಂಡ್ ರೂಲನ್ನು ದೇವೇಗೌಡ ಮುಂದುವರಿಸಿದ್ದಾರೆ. ಈ ದೇಶದ ಸಂವಿಧಾನದ ಬಗ್ಗೆ ದೇವೆಗೌಡರಿಗೆ ನಂಬಿಕೆ ಇಲ್ಲ. ಈವರೆಗೆ ಜೆಡಿಎಸ್‍ನವರು ಭಾರತ ಮಾತಾಕಿ ಜೈ ಹೇಳಿಲ್ಲ. ರಾಷ್ಟ್ರದ ಧ್ವಜ ಹಾರಿಸಿಲ್ಲ. ಹೀಗಾಗಿ ದೇವೇಗೌಡರು ಅವರಿಗೆ ಆಗಿರುವ ಅನುಭವವನ್ನು ಈ ರೀತಿ ಹೇಳಿದ್ದಾರೆಂದು ಟಾಂಗ್ ಕೊಟ್ಟರು.

ಬಿಎಸ್‍ವೈ ಅವರನ್ನು ಹೈಕಮಾಂಡ್ ಕಟ್ಟಿ ಹಾಕಿದೆ ಎಂಬ ಸಿದ್ದರಾಮಯ್ಯ ಟ್ವೀಟ್ ಗೆ ಕೂಡ ಕಟೀಲ್ ತಿರುಗೇಟು ಕೊಟ್ಟರು. ಮಾಜಿ ಸಿಎಂ ಸಿದ್ಧರಾಮಯ್ಯ ಬಗ್ಗೆ ನಮಗೆ ಅಯ್ಯೋ ಅನ್ನಿಸುತ್ತಿದೆ. ಅವರು ರಾಜೀನಾಮೆ ನೀಡಿ 6 ತಿಂಗಳಾದರೂ ಸಿಎಲ್‍ಪಿ ನಾಯಕರ ಆಯ್ಕೆ ಆಗಿಲ್ಲ. ಅಲ್ಲದೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆಯೂ ಮಾಡಲು ಆಗಿಲ್ಲ. ಹೀಗಿರುವಾಗ ನಮ್ಮ ಹೈಕಮಾಂಡ್, ಸಿಎಂ ಕೈಕಾಲು ಕಟ್ಟಿ ಹಾಕಿದೆ ಎಂಬುದು ಸುಳ್ಳು ಅಂತ ಸ್ಪಷ್ಟಪಡಿಸಿದರು.

siddaramaiah 3

ಹಾಗೆಯೇ ಸಿದ್ದರಾಮಯ್ಯ ಸಿಎಲ್‍ಪಿ ನಾಯಕರಾಗಿರಲಿ ಅಂತ ಹೈಕಮಾಂಡ್ ಕೈಕಾಲು ಹಿಡೀತಿದ್ದಾರೆ. ಅವರ ಪರಿಸ್ಥಿತಿಯನ್ನು ಬಿಎಸ್‍ವೈಗೆ ಹೋಲಿಸಿ ಹೇಳುತ್ತಿದ್ದಾರೆ. ಸಿಎಂ ಬಿಎಸ್‍ವೈಗೆ ಹೈಕಮಾಂಡ್ ಪೂರ್ಣ ಜವಾಬ್ದಾರಿ ನೀಡಿದ್ದು, ನಂಬಿ ಬಂದ 10 ಮಂದಿಗೆ ಸಚಿವ ಸ್ಥಾನ ನೀಡಿ ನುಡಿದಂತೆ ನಡೆದಿದ್ದಾರೆ. ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆಗಾಗಿ ಅವರ ಶಾಸಕರು ಸೋನಿಯಾ ಮನೆ ಬಳಿ ಧರಣಿ ಕೂಡಲಿ. ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿನವರಿಗಿಲ್ಲ ಎಂದು ಕೈ ನಾಯಕರಿಗೆ ಕಿವಿಮಾತು ಹೇಳಿದರು.

ಸಚಿವ ಸ್ಥಾನಕ್ಕಾಗಿ ಯಾವುದೇ ಬಿಜೆಪಿಯಲ್ಲಿ ಅಸಮಾಧಾನ ಇಲ್ಲ. ಬಂದವರು ಹೋದವರು ಎಂಬ ಬೇಧವಿಲ್ಲ ಎಂದು ಸ್ಪಷ್ಟಪಡಿಸಿದ್ದು, ಅನರ್ಹರಾಗಿ ಗೆದ್ದು ಈಗ ಬಿಜೆಪಿ ಸೇರಿರುವ ಶಾಸಕರನ್ನು ಹಾಡಿ ಹೊಗಳಿದ ಕಟೀಲ್, ಹೊಸದಾಗಿ ಬಂದವರು ಹಾಲಿನೊಂದಿಗೆ ಸಕ್ಕರೆಯಾಗಿ ಬೆರೆತಿದ್ದಾರೆ ಎಂದರು.

CTD 1 2

Share This Article
Leave a Comment

Leave a Reply

Your email address will not be published. Required fields are marked *