ಮೋದಿ ಯಾವಾಗ ಏನು ಮಾತಾಡ್ತಾರೆ ಅಂತಾನೆ ಗೊತ್ತಾಗಲ್ಲ: ಖರ್ಗೆ

Public TV
2 Min Read
glb kharge

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಯಾವಾಗ ಏನು ಮಾತನಾಡುತ್ತಾರೆ ಎಂದು ಗೊತ್ತಾಗುವುದೇ ಇಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಪಾಕಿಸ್ತಾನಕ್ಕೆ ನೀರು ಬಿಡುವುದಿಲ್ಲ ಎನ್ನುತ್ತಾರೆ. ಇದರ ಅಗತ್ಯವಿತ್ತೇ, ಪ್ರಧಾನಿ ಮೋದಿಗೆ ಯಾವಾಗ ಏನು ಮಾತನಾಡಬೇಕೆಂಬುದೇ ಗೊತ್ತಿಲ್ಲ. ಇದನ್ನೆಲ್ಲ ಜನ ಗಮನಿಸುತ್ತಾರೆ. ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹರಿಹಾಯ್ದರು.

pm narendra modi

ಸಾವರ್ಕರ್ ಗೆ ಭಾರತ ರತ್ನ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರ, ಹರ್ಯಾಣ ವಿಧಾನಸಭೆ ಚುನಾವಣೆ ಇರುವುದರಿಂದ ಈಗ ಮಾತನಾಡಲು ಆಗುವುದಿಲ್ಲ. ಈ ಬಗ್ಗೆ ಚುನಾವಣೆ ಮುಗಿದ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದು ಜಾರಿಕೊಂಡರು.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಇಂದು ಬಹಿರಂಗ ಪ್ರಚಾರ ಅಂತ್ಯವಾಗಿದೆ. ಮಹಾರಾಷ್ಟ್ರದಲ್ಲಿ ಒಳ್ಳೆಯ ಸ್ಥಿತಿ ಇದೆ, ನಾನು ಸಾಧ್ಯವಾದಷ್ಟು ಪ್ರಮುಖ ಸ್ಥಳದಲ್ಲಿ ಪ್ರಚಾರ ಮಾಡಿದ್ದೇನೆ. ರೈತರು ಸೇರಿದಂತೆ ಜನರು ಮಹಾರಾಷ್ಟ್ರ ಸರ್ಕಾರ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಅಲ್ಲದೆ ಮುಂಬೈ ಸುತ್ತಮುತ್ತ ಹಾಗೂ ಮಹಾರಾಷ್ಟ್ರದಲ್ಲಿ 2,200 ಉದ್ಯಮಗಳು ಮುಚ್ಚಿಹೋಗಿವೆ ಹೀಗಾಗಿ ಜನ ಈ ಬಾರಿ ಬಿಜೆಪಿಗೆ ಮತ ಹಾಕುವುದಿಲ್ಲ ಎಂದರು.

VD Savarkar

ಎನ್‍ಸಿಪಿ, ಕಾಂಗ್ರೆಸ್, ಸಿಪಿಎಂ ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸುತ್ತಿದ್ದೇವೆ. ಈ ಬಾರಿ ಮೈತ್ರಿ ಸರ್ಕಾರ ಬರುವ ಸಾಧ್ಯತೆ ಹೆಚ್ಚಿದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಎಲ್ಲವನ್ನೂ ತೋರಿಸುತ್ತಾರೆ. ಅನೇಕ ಉದ್ಯೋಗಪತಿಗಳು ಚಾನೆಲ್‍ಗಳನ್ನು ನಡೆಸುತ್ತಿದ್ದಾರೆ. ಅಪ್ರತ್ಯಕ್ಷವಾಗಿ ಕೆಲವು ಮಾಧ್ಯಮಗಳನ್ನು ಬಿಜೆಪಿಯವರು ಕಂಟ್ರೋಲ್‍ನಲ್ಲಿ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ಚುನಾವಣೆಗಾಗಿ ಹತ್ತಾರು ದಿವಸಗಳ ಕಾಲಹರಣ ಮಾಡಿದ್ದಾರೆ. ರಾಜ್ಯದಲ್ಲಿ ಏನು ಕೆಲಸ ಮಾಡಿದ್ದಾರೆ ಎಂದು ಹೇಳಲು ಯಾವುದೇ ವಿಷಯ ಇಲ್ಲ. ಐದು ವರ್ಷಗಳಲ್ಲಿ ಫಡ್ನವಿಸ್ ಸರ್ಕಾರ ಏನು ಮಾಡಿದೆ ಎಂಬದರ ಕುರಿತು ಉತ್ತರಿಸುತ್ತಿಲ್ಲ. 370 ರದ್ದು ಮಾಡಿದ್ದೇವೆ. ಅದನ್ನು ಮಾಡಿದ್ದೇವೆ, ಇದನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ವಿಷಯದ ಮೇಲೆ ಅವರು ಚುನಾವಣೆ ಮಾಡುತ್ತಾರೆ, ರಾಜ್ಯದಲ್ಲಿ ಏನು ಮಾಡಿದ್ದಾರೆ ಎಂಬುದರ ಕುರಿತು ಹೇಳಲ್ಲ ಎಂದು ಕಿಡಿಕಾರಿದರು.

devendra fadnavis

ಮಹದಾಯಿ ವಿಚಾರವನ್ನು ನಾವು ಹಿಂದೆ ಅಧಿಕಾರದಲ್ಲಿದ್ದಾಗಲೂ ಚರ್ಚೆ ಮಾಡಿದ್ದೇವೆ. ಗೋವಾಗೆ ಬಹಳಷ್ಟು ನೀರು ಹರಿದು ಹೋಗುತ್ತದೆ. 8 ಟಿಎಂಸಿ ನೀರು ಕೇಳಿದ್ದೇವೆ, ಗೋವಾದವರು ಗಮನ ಹರಿಸುತ್ತಿಲ್ಲ. ಆ ಭಾಗದ ಜನರ ಸಮಸ್ಯೆಯಷ್ಟೇ ಅಲ್ಲ ಇದು ಇಡೀ ರಾಜ್ಯದ ಸಮಸ್ಯೆ. ಇದು ನಮ್ಮ ರಾಜ್ಯದ ಸಮಸ್ಯೆ ಎಂದು ಪರಿಗಣಿಸಿ ಎಲ್ಲರೂ ಪಕ್ಷಾತೀತವಾಗಿ ಸೇರಿ ಇದನ್ನು ಬಗೆಹರಿಸಬೇಕು ಎಂದರು.

Share This Article
Leave a Comment

Leave a Reply

Your email address will not be published. Required fields are marked *