ನವದೆಹಲಿ: ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ಅಂತ್ಯವಾಗಿದೆ. ಎರಡು ಹಂತಗಳಲ್ಲಿ ನಡೆದ ಸಭೆಯಲ್ಲಿ ಹಾಲಿ ಶಾಸಕರು ಸೇರಿದಂತೆ ಕಳೆದ ಬಾರಿ ಕಡಿಮೆ ಅಂತರದಿಂದ ಸೋತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ತಿರ್ಮಾನಕ್ಕೆ ಬಂದಿದ್ದಾರೆ.
ಇದರ ಜೊತೆ ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ ಜೆಡಿಎಸ್ ಬಂಡಾಯ ಶಾಸಕರು, ಆನಂದ್ ಸಿಂಗ್, ಅಶೋಕ್ ಖೇಣಿ ಹಾಗೂ ನಾಗೇಂದ್ರ ಅವರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಮಗ ಯತೀಂದ್ರಗೆ ಟಿಕೆಟ್ ಸಲುವಾಗಿ ಸಭೆಯಲ್ಲಿ ಸಖತ್ ಫೈಟ್ ನಡೆದಿದ್ದು, ಒಮ್ಮತದ ನಿರ್ಧಾರಕ್ಕೆ ಬರಲಿಲ್ಲ. ಹೀಗಾಗಿ ಮುಖಂಡರ ಮಕ್ಕಳಿಗೆ ಟಿಕೆಟ್ ನೀಡುವ ವಿಚಾರನ್ನು ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದಾರೆ ಎನ್ನಲಾಗಿದೆ.
ಇಂದು ಕಾಂಗ್ರೆಸ್ ಹಿರಿಯ ನಾಯಕರು ಹಾಗೂ ಕಾಂಗ್ರೆಸ್ ಸಂಸದರ ಜೊತೆ ಚುನಾವಣಾ ಪರಿಶೀಲನಾ ಸಮಿತಿ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಸಭೆ ನಡೆಸಲಿದ್ದಾರೆ. ಗುರುವಾರ ಸಂಜೆ ವೇಳೆಗೆ ಸ್ಕ್ರೀನಿಂಗ್ ಕಮಿಟಿ ತನ್ನ ಅಂತಿಮ ವರದಿಯನ್ನು ಹೈಕಮಾಂಡ್‍ಗೆ ನೀಡಲಿದೆ. ಏಪ್ರಿಲ್ 13 ಶುಕ್ರವಾರದಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಿ, ಅಭ್ಯರ್ಥಿಗಳ ಆಯ್ಕೆಗೆ ಅಂಕಿತ ಹಾಕಲಿದೆ. ಅಂದೇ ಮೊದಲ ಹಂತದಲ್ಲಿ 130 ಅಭ್ಯರ್ಥಿಗಳ ಹೆಸರು ಪ್ರಕಟಿಸುವ ಸಾಧ್ಯತೆ ಇದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳೀದುಬಂದಿದೆ.