ಲಕ್ನೋ: ಪಾಕಿಸ್ತಾನದ ಬಳಿ ಅಣುಬಾಂಬ್ (Nuclear Bomb) ಇದೆ. ಆದರೆ ಅದನ್ನು ನಿರ್ವಹಿಸಲು ಅವರ ಬಳಿ ಹಣವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರಪ್ರದೇಶದ ಹಮೀರ್‌ಪುರದಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡುತ್ತಾ ಮೋದಿಯವರು (Narendra Modi) ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು. ಪಾಕಿಸ್ತಾನದಲ್ಲಿ ಅಣುಬಾಂಬ್ ಇದೆ ಎಂದು ಕಾಂಗ್ರೆಸ್ ಹೇಳುತ್ತದೆ. ಆದರೆ ಅದನ್ನು ನಿರ್ವಹಿಸಲು ಪಾಕಿಸ್ತಾನದ ಬಳಿ ಹಣವಿಲ್ಲ ಎಂದು ಪಕ್ಷಕ್ಕೆ ತಿಳಿದಿಲ್ಲ ಎಂದು ಕುಟುಕಿದರು.
370 ನೇ ವಿಧಿಯನ್ನು ಮರುಸ್ಥಾಪಿಸಲು ಕಾಂಗ್ರೆಸ್ (Congress) ಯೋಜಿಸುತ್ತಿದೆ ಎಂದು ಇದೇ ವೇಳೆ ಆರೋಪಿಸಿದ ಪ್ರಧಾನಿ, ಕಾಂಗ್ರೆಸ್ 370 ನೇ ವಿಧಿಯನ್ನು ಮತ್ತೆ ಹಿಂಪಡೆಯುವುದಾಗಿ ಹೇಳುತ್ತದೆ. ಇದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ವಿವಾದಾತ್ಮಕ ನಿಬಂಧನೆಯ ಬಗ್ಗೆ ಪಕ್ಷದ ನಿಲುವನ್ನು ಎತ್ತಿ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಾಕ್ ಸಹ ಅಣುಬಾಂಬ್ ಹೊಂದಿದೆ, ಕೆರಳಿಸಿದ್ರೆ ಭಾರತದ ಮೇಲೆ ಎಸೆಯುತ್ತಾರೆ: ಕಾಂಗ್ರೆಸ್ ಮಾಜಿ ಸಚಿವ ಪ್ರಚೋದನಕಾರಿ ಹೇಳಿಕೆ!
ಈ ಹಿಂದೆ ಮಾತನಾಡಿದ್ದ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ (Mani Shankar Aiyar) , ಪಾಕಿಸ್ತಾನವು ಸಹ ಅಣುಬಾಂಬ್‌ಗಳನ್ನ (Nuclear Bombs) ಹೊಂದಿದೆ. ನಮ್ಮ ಸರ್ಕಾರ ಅವರನ್ನ ಕೆರಳಿಸಿದರೆ, ಭಾರತದ ಮೇಲೆ ಎಸೆಯಬಹುದು. ಆದ್ದರಿಂದ ಭಾರತವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು, ಇಲ್ಲದಿದ್ದರೆ ದೇಶವು ಭಾರೀ ಬೆಲೆ ತೆರಬೇಕಾಗುತ್ತದೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ಹಳೆಯ ವೀಡಿಯೋ ಆಗಿದ್ದು, ಇತ್ತೀಚೆಗೆ ಭಾರೀ ವೈರಲ್ ಆಗಿತ್ತು.