ನವದೆಹಲಿ: ಕಳೆದ ಬುಧವಾರ ರಾಜ್ಯಸಭೆ ಮತ್ತು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಕೆ.ಸಿ.ರಾಮಮೂರ್ತಿ ಅವರು ಇಂದು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು. ಆ ಬಳಿಕ ಮಾತಾನಾಡಿದ ಅವರು, ಪ್ರಧಾನಿ ಮೋದಿ ಕೆಲಸಗಳನ್ನು ಮೆಚ್ಚಿಕೊಂಡಿದ್ದೇನೆ. ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗುವ ಉದ್ದೇಶದಿಂದ ಬಿಜೆಪಿ ಸೇರಿದ್ದೇನೆ ಎಂದರು.
Advertisement
Former Congress Rajya Sabha MP Shri KC Ramamurthy joined the Bharatiya Janata Party in the auspicious presence of BJP National Working President Shri @JPNadda at the BJP Headquarters in New Delhi. pic.twitter.com/KRU2yX2kHB
— BJP (@BJP4India) October 22, 2019
Advertisement
ನಾನು ಇನ್ನೂ ಬಿಜೆಪಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಆರ್ ಎಸ್‍ಎಸ್ ಸಿದ್ಧಾಂತ-ತತ್ವದ ಬಗ್ಗೆ ಅಧ್ಯಯನ ಮಾಡೋಕೆ ನನಗೆ ಇನ್ನೂ ಸ್ವಲ್ಪ ಸಮಯಬೇಕಿದೆ. ತ್ರಿವಳಿ ತಲಾಕ್, ಆರ್ಟಿಕಲ್ 370 ರದ್ದಿನಂತಹ ಮಹತ್ವದ ವಿಚಾರಗಳಲ್ಲಿ ವಿರುದ್ಧವಾಗಿ ಮತ ಚಲಾಯಿಸಿ ಆತ್ಮ ವಂಚನೆ ಮಾಡಿಕೊಂಡಿದ್ದೇನೆ ಎಂದು ರಾಮಮೂರ್ತಿ ಹೇಳಿದರು.
Advertisement
ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾತನಾಡಿದ್ದ ಅವರು, 1 ವರ್ಷಕ್ಕೂ ಹೆಚ್ಚು ಸಮಯದಿಂದ ಯೋಚಿಸಿ ಈ ನಿರ್ಧಾರ ಕೈಗೊಂಡಿದ್ದೇನೆ. ಬಿಜೆಪಿ ಸೇರುವ ಬಗ್ಗೆ ಒಲವು ಇದೆ. ನನ್ನನ್ನು ಅವರು ಸಮರ್ಪಕವಾಗಿ ಬಳಸಿಕೊಳ್ಳುವುದಾದರೆ ನಾನು ಬಿಜೆಪಿ ಸೇರಲು ಸಿದ್ಧವಾಗಿದ್ದೇನೆ. ಅಮಿತ್ ಶಾ ಅವರನ್ನು ಬೇರೆ ಬೇರೆ ಕಾರಣಗಳಿಗೆ ಭೇಟಿ ಮಾಡಿದ್ದೇನೆ. ಬಿಜೆಪಿ ಕೆಲ ನಾಯಕರನ್ನು ಭೇಟಿ ಮಾಡಿದ್ದೆ. ಯಾವುದೇ ಆಮಿಷಗಳಿಗೆ ನಾನು ಬಲಿಯಾಗಿಲ್ಲ ಮತ್ತು ರಾಜೀನಾಮೆ ನೀಡಲು ಯಾವುದೇ ಬೆದರಿಕೆಗಳು ಇಲ್ಲ ಎಂದು ಬಿಜೆಪಿ ಸೇರುವ ಬಗ್ಗೆ ಸ್ಪಷ್ಟನೆ ನೀಡಿದ್ದರು.
Advertisement
ರಾಮಮೂರ್ತಿ ಅವರ ರಾಜೀನಾಮೆಯಿಂದ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಬಲ 45ಕ್ಕೆ ಕುಸಿತಗೊಂಡಿತ್ತು. ಸದ್ಯ ಅವರು ರಾಜೀನಾಮೆ ನೀಡಿರುವ ಸ್ಥಾನದ ಉಪಚುನಾವಣೆಯಲ್ಲಿ ಬಿಜೆಪಿಯೇ ಈ ಸ್ಥಾನ ಗೆಲ್ಲುವ ಸಾಧ್ಯತೆ ಇದ್ದು, ಅತಿ ದೊಡ್ಡ ಪಕ್ಷವಾಗಿರುವುದರಿಂದ ಗೆಲುವು ಸುಲಭ. ಈ ಸ್ಥಾನ ಬಿಜೆಪಿಗೆ ಲಭಿಸಿದರೆ ರಾಜ್ಯಸಭೆಯ ಬಲ 84ಕ್ಕೆ ಹೆಚ್ಚಳವಾಗಲಿದೆ. ರಾಜ್ಯಸಭೆಯ ಒಟ್ಟು 245 ಸ್ಥಾನಗಳ ಪೈಕಿ ಬಹುಮತಕ್ಕೆ 123 ಸದಸ್ಯರ ಬೆಂಬಲ ಬೇಕು. ಸದ್ಯ ಒಟ್ಟು 5 ಸ್ಥಾನಗಳು ಖಾಲಿ ಇದ್ದು, ಎನ್‍ಡಿಎ ಮೈತ್ರಿಕೂಡದ ಒಟ್ಟು ಬಲಾಬಲ 106 ಇದೆ. ಮಹತ್ವದ ಮಸೂದೆ ಚರ್ಚೆಯ ವೇಳೆ ಎಐಎಡಿಎಂಕೆ 11, ಬಿಜೆಡಿ 7, ಟಿಆರ್ ಎಸ್ 6, ವೈಎಸ್‍ಆರ್ ಕಾಂಗ್ರೆಸ್ 2 ಸೇರಿದಂತೆ ಇನ್ನೂ ಮೂರು ಪ್ರಾದೇಶಿಕ ಪಕ್ಷಗಳ ಸದಸ್ಯರು ಮೋದಿ ಸರ್ಕಾರವನ್ನು ಬೆಂಬಲಿಸಿದ್ದಾರೆ.