ಚಿಕ್ಕೋಡಿ (ಬೆಳಗಾವಿ): ಜಿಲ್ಲೆಯ ಅಥಣಿಯಲ್ಲಿ ಕಾಂಗ್ರೆಸ್ ರೆಬೆಲ್ ಶಾಸಕ ಮಹೇಶ್ ಕುಮಟಳ್ಳಿ ಅವರು ಆಟೋ ಚಾಲಕನಿಗೆ ಟ್ರಾಫಿಕ್ ಪಾಠ ತೆಗೆದುಕೊಂಡಿದ್ದಾರೆ.
ಭೂಸ್ವಾಧೀನ ಕಾಯಿದೆ ತಿದ್ದುಪಡಿ ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಸದಸ್ಯರು ಅಥಣಿಯಲ್ಲಿ ಸಂಕೇಶ್ವರ ಜೇವರ್ಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಶಾಸಕರು ಕೂಡ ರೈತರಿಗೆ ಬೆಂಬಲ ನೀಡಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಟೋದಲ್ಲಿ ಕೂರಿಸಿಕೊಂಡು ಚಾಲಕ ಹೋಗುತ್ತಿದ್ದ. ತಕ್ಷಣವೇ ಪೊಲೀಸರು ತಡೆದು ವಿಚಾರಣೆ ನಡೆಸಿದರು.
ಆಟೋ ಚಾಲಕ ಬಳಿಗೆ ಬಂದ ಶಾಸಕ ಮಹೇಶ್ ಕುಮಟಳ್ಳಿ ಅವರು, ನಿನಗೆ ಬುದ್ಧಿ ಇದೇಯೊ ಇಲ್ಲವೋ? ಇಷ್ಟು ಮಕ್ಕಳನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಿರುವೆ. ಏನಾದರೂ ಅನಾಹುತವಾದರೆ ಯಾರು ಜವಾಬ್ದಾರರು? ಸಂಚಾರ ನಿಯಮ ಪಾಲನೆ ಮಾಡಬೇಕು. ಇದೇ ಕೊನೆ ಮತ್ತೊಮ್ಮೆ ಹೀಗೆ ಮಕ್ಕಳನ್ನು ಕರೆದುಕೊಂಡು ಹೋದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚಾಲಕನಿಗೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಭೂಸ್ವಾಧೀನ ಕಾಯ್ದೆ ತಿದ್ದುಪಡಿಯು ರೈತ ವಿರೊಧಿ ನೀತಿಯನ್ನು ಹೊಂದಿದೆ. ಕೂಡಲೇ ಇದನ್ನು ನಿಲ್ಲಿಸಬೇಕು. ಯಾವುದೇ ಸರ್ಕಾರವು ರೈತ ವಿರೋಧಿ ನೀತಿ ಅನುಸರಿಸಬಾರದು. ರೈತರ ಭೂಮಿಯನ್ನು ಯೋಗ್ಯ ಬೆಲೆಗೆ ಖರೀದಿಸುವಂತಾಗಬೇಕು ಎಂದು ಆಗ್ರಹಿಸಿದರು.