ಬೆಂಗಳೂರು: ಉಪ ಚುನಾವಣೆ ಘೋಷಣೆಯಾದ 15 ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಆಪರೇಷನ್ ಹಸ್ತ ನಡೆಯುವುದು ಬಹುತೇಕ ಪಕ್ಕಾ ಆಗಿದೆ. ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿದ್ದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಿಂದ ಅಭ್ಯರ್ಥಿಗಳನ್ನು ಕರೆತಂದು ಟಿಕೆಟ್ ಕೊಡುವುದು ಗ್ಯಾರಂಟಿ.
ಎಲ್ಲೆಲ್ಲಿ ಯಾರಿಗೆ ‘ಕೈ’ ಗಾಳ?:
ಹೊಸಕೋಟೆಯಲ್ಲಿ ಬಿಜೆಪಿ ಸಂಸದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡರನ್ನ ಕಾಂಗ್ರೆಸ್ಸಿಗೆ ಕರೆತಂದು ಅಭ್ಯರ್ಥಿ ಮಾಡಿದರೆ ಕಾಂಗ್ರೆಸ್ ಗೆಲುವು ಸುಲಭ ಅನ್ನೋದು ಕೈ ಪಾಳಯದ ಲೆಕ್ಕಾಚಾರವಾಗಿದೆ. ಈ ಬಗ್ಗೆ ಈಗಾಗಲೇ ಒಂದು ಹಂತದ ಮಾತುಕತೆಯೂ ನಡೆದಿದ್ದು ಬಿಜೆಪಿಗೆ ಟಕ್ಕರ್ ನೀಡಲು ಕಾಂಗ್ರೆಸ್ ಮುಂದಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಗೆ ಕಾಂಗ್ರೆಸ್ ಆಪರೇಷನ್ ಬಿಸಿ ಮುಟ್ಟುವ ಸಾಧ್ಯತೆ ಇದೆ. ಕಳೆದ ಬಾರಿಯ ಜೆಡಿಎಸ್ ಅಭ್ಯರ್ಥಿ ಅಂಜನಪ್ಪರನ್ನ ಕಾಂಗ್ರೆಸ್ಸಿಗೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಆಪರೇಷನ್ ಅಂಜನಪ್ಪ ಸಕ್ಸಸ್ ಆದರೆ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಬೆಂಬಲಿತ ಅಭ್ಯರ್ಥಿಗೆ ಟಫ್ ಫೈಟ್ ಅನ್ನೋದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ.
Advertisement
ಹಿರೆಕೇರೂರಿನಲ್ಲಿ ಕೂಡ ಕಮಲ ಪಾಳಯಕ್ಕೆ ಕೈ ಪಾಳಯದ ಬಿಸಿ ಮುಟ್ಟುವ ಸಾಧ್ಯತೆ ಇದೆ. ಬಿ.ಸಿ.ಪಾಟೀಲ್ ಅಥವಾ ಅವರ ಬೆಂಬಲಿತ ಅಭ್ಯರ್ಥಿ ವಿರುದ್ಧ ಬಿಜೆಪಿ ಪರಾಜಿತ ಅಭ್ಯರ್ಥಿ ಯು.ಬಿ.ಬಣಕಾರ್ ಅವರನ್ನ ಎದುರಾಳಿ ಆಗಿಸೋದು ಕಾಂಗ್ರೆಸ್ ಲೆಕ್ಕಾಚಾರ. ಯು.ಬಿ.ಬಣಕಾರ್ ಅಥವಾ ಅವರ ಪುತ್ರನನ್ನ ಕಾಂಗ್ರೆಸ್ ಅಭ್ಯರ್ಥಿ ಆಗಿಸಲು ಕೈ ಪಾಳಯ ಕಸರತ್ತು ನಡೆಸುತ್ತಿದೆ.
Advertisement
ಎಸ್.ಟಿ ಸೋಮಶೇಖರ್ ಪ್ರತಿನಿಧಿಸಿದ್ದ ಯಶವಂತಪುರ ಕ್ಷೇತ್ರದಲ್ಲಿ ಆಪರೇಷನ್ ಹಸ್ತದ ಬಿಸಿ ಜೆಡಿಎಸ್ ಗೆ ತಟ್ಟುವ ಸಾಧ್ಯತೆ ಇದೆ. ಕಳೆದ ಬಾರಿಯ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡರನ್ನ ಕಾಂಗ್ರೆಸ್ಸಿಗೆ ಸೆಳೆಯಲು ಕೈ ನಾಯಕರು ಮುಂದಾಗಿದ್ದಾರೆ. ಹೀಗೆ ಚುನಾವಣೆ ಘೋಷಣೆಯಾದ 15 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ ಮುಂದಾಗಿದ್ದು ಬಿಜೆಪಿ ಹಾಗೂ ಜೆಡಿಎಸ್ ಎರಡಕ್ಕೂ ಟಕ್ಕರ್ ನೀಡಲು ಮುಂದಾಗಿದೆ ಎನ್ನಲಾಗಿದೆ.