2019 ಲೋಕಸಭಾ ಚುನಾವಣೆಗೆ ಮೈತ್ರಿ ರಚಿಸಲು ಸಮಿತಿ ರಚನೆ – ರಾಹುಲ್ ಗಾಂಧಿ

Public TV
1 Min Read
RAHUL GANDHI

-ಪ್ರಜಾಪ್ರಭುತ್ವದ ಉಳಿವಿವಾಗಿ ಮೈತ್ರಿ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಮೈತ್ರಿ ಕುರಿತ ನಿರ್ಣಯ ಕೈಗೊಳ್ಳಲು ಪಕ್ಷದ ಅಂತರಿಕ ಸಮಿತಿ ರಚಿಸುವುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಭೆಯ ಮುಕ್ತಾಯದ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿಗೆ ಸಿದ್ಧವಿರುವ ಸಮಾನ ಮನಸ್ಕರೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸಭೆಯಲ್ಲಿ ಮುಖಂಡರಿಗೆ ಪಕ್ಷದ ಸಂಘಟನೆಯ ಕುರಿತು ಚರ್ಚೆ ನಡೆಸಿರುವ ರಾಹುಲ್, ಇದುವರೆಗೂ ಪಕ್ಷಕ್ಕೆ ಮತ ಹಾಕದ ಪ್ರತಿ ಕ್ಷೇತ್ರದ ಜನರನ್ನು ತಲುಪಿ ಅವರ ಮನಸ್ಸು ಬದಲಿಸಿ ಮತ ನೀಡುವಂತೆ ಅವರ ವಿಶ್ವಾಸಗಳಿಸಿ ಎಂದು ಹೇಳಿದ್ದಾರೆ.

ಮುಂದಿನ ಚುನಾವಣೆಗೆ ಕಡಿಮೆ ಸಮಯದ ಅವಧಿ ಇದ್ದು, ಹಲವು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಪಕ್ಷದ ಗೆಲ್ಲುವ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಅಲ್ಲದೇ ಬಿಜೆಪಿ ವಿರುದ್ಧ ಹೋರಾಟ ಕಾಂಗ್ರೆಸ್ ಪಕ್ಷದ ಮುಂದಾಳತ್ವದಲ್ಲಿ ನಡೆಯ ಬೇಕೆಂದಿದ್ದಾರೆ.

ಸಭೆಯ ಬಳಿಕ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ ದೇಶದಲ್ಲಿ ಪಕ್ಷವು 12 ರಾಜ್ಯಗಳಲ್ಲಿ ಬಲಿಷ್ಠವಾಗಿದೆ. ಇದು ಮೈತ್ರಿ ಮಾಡಿಕೊಳ್ಳುವಲ್ಲಿ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಪಕ್ಷದ ಮೈತ್ರಿ ರಚನೆ ಕುರಿತು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ಶನಿವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಪಕ್ಷದಲ್ಲಿ ಸಮಿತಿ ರಚಿಸುವ ಕುರಿತು ರಾಹುಲ್ ಗಾಂಧಿ ತೀರ್ಮಾನ ಕೈಗೊಳ್ಳಲಿದ್ದಾರೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *