– ದೇಶದ ಎಲ್ಲ ರೈತರ ಸಾಲ ಮನ್ನಾ
– ದೇಶದ ಚೌಕಿದಾರ ಅಲ್ಲ, ಅಂಬಾನಿ, ಅದಾನಿಯ ಚೌಕಿದಾರ ಮೋದಿ
ಹಾವೇರಿ: ಪ್ರಧಾನಿ ನರೇಂದ್ರ ಮೋದಿ ರೈತರ ಖಾತೆಗೆ ದುಡ್ಡು ಹಾಕುವ ಯೋಜನೆ ಜಾರಿಗೆ ತಂದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಗ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದು, ಎಲ್ಲ ಬಡವರ ಖಾತೆಗೆ ದುಡ್ಡು ಹಾಕುವುದಾಗಿ ಘೋಷಿಸಿ ಹೊಸ ಸಂಚಲನ ಮೂಡಿಸಿದ್ದಾರೆ.
ಹಾವೇರಿ ಸಮಾವೇಶದಲ್ಲಿ ಮಾತನಾಡಿದ ಅವರು, 2019ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಮೇಲೆ ಬಡ ವರ್ಗದ ಜನರಿಗೆ ಕನಿಷ್ಠ ಆದಾಯವನ್ನು ನೀಡಲಾಗುತ್ತದೆ. ಪ್ರತಿ ತಿಂಗಳು ಬಡಜನರ ಖಾತೆಗೆ ನೇರವಾಗಿ ನಿಮ್ಮ ಹಣ ಬರಲಿದೆ. ನರೇಂದ್ರ ಮೋದಿ ಅವರು ಚೋಕ್ಸಿ, ಅಂಬಾನಿ, ನೀರವ್ ಮೋದಿ ಖಾತೆಗೆ ಸಾವಿರಾರು ಕೋಟಿ ಹಾಕಿದ್ದಾರೆ. ಛತ್ತೀಸ್‍ಗಢದಲ್ಲಿ ನಾವು ರೈತರಿಗೆ ನೇರವಾಗಿ ಖಾತೆಗೆ ಹಣ ನೀಡುತ್ತೇವೆ ಅಂದಾಗ ಮೋದಿ ಸರ್ಕಾರ ತಮ್ಮ ಬಜೆಟ್ ನಲ್ಲಿ ರೈತರಿಗೆ 2 ಸಾವಿರ ರೂ. ನೀಡಿದ್ರು. ಅಂದ್ರೆ ದಿನಕ್ಕೆ ರೈತರಿಗೆ ಮೂರುವರೆ ರೂಪಾಯಿ ನೀಡುತ್ತಿದ್ದಾರೆ. ಅಂಬಾನಿ, ಅದಾನಿಗೆ 30 ಸಾವಿರ ಕೋಟಿ ನೀಡುತ್ತಾರೆ ಇದು ಯಾವುದು ಲೆಕ್ಕ. ನಾವು ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡಲು ಹೋಗಲ್ಲ. ಕನಿಷ್ಠ ಮಾಸಿಕ ವೇತನವನ್ನು ನೀಡುತ್ತೇವೆ ಎಂದು ಘೋಷಿಸಿದ್ದಾರೆ.
Advertisement
Advertisement
ಈ ಹಿಂದೆ ಕರ್ನಾಟಕದ ಸರ್ಕಾರ ರೈತರಿಗೆ ಲಾಲಿಪಾಪ್ ನೀಡುತ್ತಿದ್ದೇವೆ ಎಂದು ಪ್ರಧಾನಿ ಹೇಳಿದ್ದರು. ಸರ್ಕಾರ ರಚನೆಯಾದ ಮೇಲೆ 11 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದೇವೆ. ನೋಟ್ ನಿಷೇಧದಿಂದ ನಿಮ್ಮೆಲ್ಲರನ್ನು ಸರದಿಯಲ್ಲಿ ನಿಲ್ಲುವಂತೆ ಮಾಡಿದರು. ಕೇಳಿದ್ರೆ ಕಪ್ಪು ಹಣದ ನಿಯಂತ್ರಣ ಅಂದ್ರು. ಸೂಟ್ ಬೂಟ್ ಧರಿಸಿದ ವ್ಯಕ್ತಿಯನ್ನು ನೋಡಿದ್ದೀರಾ? ರಫೇಲ್ ಹಗರಣದಿಂದ 30 ಸಾವಿರ ಕೋಟಿ ಕದ್ದು ಅಂಬಾನಿಯ ಜೇಬಿಗೆ ಹಾಕಿದರು. ಸಿಬಿಐ ಅಧಿಕಾರಿಯನ್ನು ರಾತ್ರೋ ರಾತ್ರಿ ಹುದ್ದೆಯಿಂದ ಕೆಳಗೆ ಇಳಿಸುತ್ತಾರೆ. ಮೋದಿ ಎಲ್ಲೇ ನೋಡಿದ್ರೆ ಅನಿಲ್ ಅಂಬಾನಿ, ಅದಾನಿ ಹೆಸರು ಕೇಳುತ್ತೇವೆ ಎಂದರು.
Advertisement
ಐದು ವರ್ಷದಿಂದ ಯುವಜನಾಂಗಕ್ಕೆ ಉದ್ಯೋಗ ನೀಡುತ್ತೇವೆ ಎಂದು ಭಾಷಣದಲ್ಲಿ ಹೇಳುತ್ತಾ ಬಂದಿದ್ದೀರಿ. ಮೋದಿ ಕಾಲದಲ್ಲಿಯೇ ಅತ್ಯಂತ ಹೆಚ್ಚು ನಿರುದ್ಯೋಗ ಸೃಷ್ಟಿಯಾಗಿದ್ದು, 45 ವರ್ಷಗಳಲ್ಲಿ ಇದೇ ಮೊದಲು. ಡೊಕ್ಲಾಮ್ ಬಳಿ ಚೀನಾ ಸೇನೆ ಕುಳಿತಿದ್ದರೆ, ಪ್ರಧಾನಿಗಳು ಅಲ್ಲಿನ ಅಧ್ಯಕ್ಷರ ಜೊತೆ ಉಯ್ಯಾಲೆಯಲ್ಲಿ ಕುಳಿತು ಮಾತನಾಡಿದ್ದರು. ಇದೂವರೆಗೆ ಚೀನಾ ನಮ್ಮ ಮೇಲೆ ಹಲವು ಬಾರಿ ದಾಳಿ ನಡೆಸಿದ್ರೂ, ಪ್ರಧಾನಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ದೂರಿದರು.
Advertisement
ಮೋದಿಜೀ, ಹಿಂದೂಸ್ತಾನವನ್ನು ಎರಡು ಭಾಗವಾಗಿ ವಿಂಗಡನೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಮೊದಲನೇಯ ಹಿಂದೂಸ್ತಾನದಲ್ಲಿ ಅನಿಲ್ ಅಂಬಾನಿ, ವಿಜಯ್ ಮಲ್ಯ, ಚೋಕ್ಸಿ, ನೀರವ್ ಮೋದಿ ಶ್ರೀಮಂತ ವರ್ಗದ ಜನರಿದ್ದಾರೆ. ಇನ್ನೊಂದು ವರ್ಗದಲ್ಲಿ ಬಡವರು, ನಿರುದ್ಯೋಗಿಗಳು, ರೈತರನ್ನು ಒಳಗೊಂಡಿದೆ. ಆದ್ರೆ ಕಾಂಗ್ರೆಸ್ ದೇಶವನ್ನು ಒಡೆಯಲು ಬಿಡಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರತ್ತಿದ್ದಂತೆ ದೇಶ ಬಿಟ್ಟು ಓಡಿ ಹೋಗಿರುವವರನ್ನು ಬಂಧಿಸಲಾಗುವುದು. ಮೋದಿಯವರೇ ಇಂತಹ ಕಳ್ಳರಿಗೆ ಸಹಾಯ ಮಾಡಿ, ನಾವು ಬಡು ಜನರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಬ್ಯಾಂಕ್ ನಲ್ಲಿರುವ ಹಣ ಕೇವಲ 15 ಜನರ ಖಾತೆಗೆ ಹೋಗುತ್ತಿದೆ ಎಂದು ಆರೋಪಿಸಿದರು.
मोदी जी आपकी चौकीदारी नहीं करते हैं, अनिल अंबानी की चौकीदारी करते हैं : कांग्रेस अध्यक्ष @RahulGandhi#NammaRahulGandhi
— Congress (@INCIndia) March 9, 2019
ಪ್ರತಿದಿನ ನಿಮ್ಮ ಹಣವನ್ನು ಕಿತ್ತುಕೊಳ್ಳುವ ಕೆಲಸ ನಡೆಯುತ್ತಿದೆ. ತೆರೆಯಲ್ಲಿ ನಿಮ್ಮ ಜಮೀನು ಕಿತ್ತುಕೊಳ್ಳುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್ ಕರ್ನಾಟಕ, ದೇಶದ ರೈತರ ಪರವಾಗಿ ಮಾಡಿದೆ. ಐದು ವರ್ಷಗಳಿಂದ ದೇಶದ ಯುವ ಜನತೆಯನ್ನು ಮೂರ್ಖರನ್ನಾಗಿ ಮಾಡಲು ಪ್ರಧಾನಿಗಳು ಪ್ರಯತ್ನಿಸುತ್ತಿದ್ದಾರೆ. ಮೋದಿಯವರ ಮೂರ್ಖತನದ ನಿರ್ಧಾರಗಳಿಂದ ದೇಶದ ಜನರು ಬೇಸತ್ತಿದ್ದಾರೆ. ನೋಟ್ ಬ್ಯಾನ್ ಮತ್ತು ಜಿಎಸ್‍ಟಿ ಯಿಂದ ದೇಶಕ್ಕೆ ಸಾಕಷ್ಟು ನಷ್ಟಕ್ಕೆ ಒಳಗಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಜಿಎಸ್‍ಟಿಯನ್ನು ತೆಗೆದು ಸರಳ ತೆರಿಗೆ ನಿಯಮಗಳ್ನು ಜಾರಿಗೆ ತರಲಾಗುವುದು ಎಂದು ಆಶ್ವಾಸನೆ ನೀಡಿದರು.
ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಸರ್ಕಾರ ರಚನೆ ಮಾಡಿದ್ದು, ಎರಡು ಪಕ್ಷಗಳು ಜೊತೆಯಾಗಿ ಕೆಲಸ ಮಾಡುತ್ತೇವೆ. ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ದೇಶದ ಏಳಿಗೆಗಾಗಿ ಕೆಲಸ ಮಾಡಬೇಕಿದೆ. ಕರ್ನಾಟಕದಲ್ಲಿಯ ಮೈತ್ರಿ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿ ರಾಹುಲ್ ಗಾಂಧಿ ಮಾತು ಮುಗಿಸಿದರು.
ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಲ್ಲ ಕಾಂಗ್ರೆಸ್ ನಾಯಕರನ್ನು ವೇದಿಕೆ ಮೇಲೆ ಬರಮಾಡಿಕೊಂಡು ಸ್ವಾಗತಿಸಿದರು. ವೇದಿಕೆಯತ್ತ ಆಗಮಿಸುತ್ತಿದ್ದಂತೆ ರಾಹುಲ್ ಗಾಂಧಿ ಅವರಿಗೆ ಶಾಲು ಹೊದಿಸಿ, ಗದೆ ನೀಡಿ ಸನ್ಮಾನಿಸಲಾಯಿತು.
ಸಮಾವೇಶ ನಡೆಯೋ ಮೈದಾನದ ಪಕ್ಕದಲ್ಲೇ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ವೇದಿಕೆ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ, ಗುಂಡೂರಾವ್ ಸೇರಿದಂತೆ ಆಯ್ದ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv