ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ಸ್ವಲ್ಪ ವಿಶ್ರಾಂತಿ ಪಡೆದ ನಾಯಕರ ಚಿತ್ತ ಈಗ ವಿಧಾನಸಭಾ ಉಪಚುನಾವಣೆಯ ಕಡೆಗೆ ನೆಟ್ಟಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿವೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಕಾಂಗ್ರೆಸ್ ಸಚಿವರ ಸಭೆ ನಡೆಸಲಾಗಿದೆ. ಸಚಿವರಿಗೆ ಚಿಂಚೋಳಿ ಹಾಗೂ ಕುಂದಗೋಳ ಕ್ಷೇತ್ರಗಳ ಉಪಚುನಾವಣೆಯ ಜವಾಬ್ದಾರಿ ನೀಡಲಾಗಿದೆ. ಕುಂದಗೋಳ ಕ್ಷೇತ್ರದ ಉಸ್ತುವಾರಿಯನ್ನು ಕುರುಬ, ಲಿಂಗಾಯತ ಸಚಿವರಾದ ಎಂಟಿಬಿ ನಾಗರಾಜು, ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್ ಅವರಿಗೆ ನೀಡಲಾಗಿದೆ. ಈ ಕ್ಷೇತ್ರದ ಸಂಪೂರ್ಣ ಜವಾಬ್ದಾರಿಯನ್ನು ಕಾಂಗ್ರೆಸ್ ಟ್ರಬಲ್ ಶೂಟರ್, ಸಚಿವ ಡಿಕೆ ಶಿವಕುಮಾರ್ ಅವರಿಗೆ ವಹಿಸಾಗಿದೆ ಎಂದು ತಿಳಿದು ಬಂದಿದೆ.
Advertisement
Advertisement
ಚಿಂಚೋಳಿ ಕ್ಷೇತ್ರದ ಜವಾಬ್ದಾರಿಯನ್ನು ಡಿಸಿಎಂ ಪರಮೇಶ್ವರ್ ಅವರಿಗೆ ನೀಡಲಾಗಿದೆ. ಇಲ್ಲಿ ಲಂಬಾಣಿ, ದಲಿತ, ಲಿಂಗಾಯತ ಸಚಿವರಿಗೆ ಸಾರಥ್ಯ ನೀಡಲಾಗಿದ್ದು, ಪ್ರಿಯಾಂಕ್ ಖರ್ಗೆ, ರಾಜಶೇಖರ್ ಪಾಟೀಲ್, ತುಕಾರಾಂ, ಈಶ್ವರ್ ಖಂಡ್ರೆ, ಪಿ.ಟಿ.ಪರಮೇಶ್ವರ್ ನಾಯಕ್, ರಹೀಂಖಾನ್ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ಕುಂದಗೋಳ ಕ್ಷೇತ್ರದ ಟಿಕೆಟ್ ಅನ್ನು ಸಿ.ಎಸ್.ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ನೀಡಲು ತೀರ್ಮಾನಿಸಲಾಗಿದೆ. ಇತ್ತ ಚಿಂಚೋಳಿ ಕ್ಷೇತ್ರದ ಟಿಕೆಟ್ ಸುಭಾಷ್ ರಾಥೋಡ್ ಅವರಿಗೆ ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Advertisement
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಡಿಸಿಎಂ ಪರಮೇಶ್ವರ್, ಸಚಿವರಾದ ಪ್ರಿಯಾಂಕ್ ಖರ್ಗೆ, ರಾಜಶೇಖರ ಪಾಟೀಲ್, ರಹೀಂ ಖಾನ್, ತುಕಾರಂ, ಆರ್.ಬಿ.ತಿಮ್ಮಾಪೂರ, ಪುಟ್ಟರಂಗಶೆಟ್ಟಿ, ಶಿವಶಂಕರ್ ರೆಡ್ಡಿ ಸೇರಿ ಹಲವು ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.