ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ ಜೋರಾಗಿದೆ. ಡಿ.ಕೆ.ಶಿವಕುಮಾರ್ ಪರವಾಗಿ 10ಕ್ಕೂ ಹೆಚ್ಚು ಶಾಸಕರು ದೆಹಲಿ ಪರೇಡ್ ನಡೆಸಿದ್ದಾರೆ. ಈ ಹೊತ್ತಿನಲ್ಲೇ ಬೆಂಗಳೂರಿನಲ್ಲಿ ದಲಿತ ನಾಯಕರು ಡಿನ್ನರ್ ಮೀಟಿಂಗ್ ನಡೆಸಿದ್ದಾರೆ.
ಚಲುವರಾಯಸ್ವಾಮಿ ನೇತೃತ್ವದಲ್ಲಿ ಶಾಸಕರ ತಂಡ ದೆಹಲಿಗೆ ತೆರಳಿದೆ. ಸಂಜೆ ಇನ್ನೊಂದು ಟೀಂ ದೆಹಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಮಾಗಡಿ ಬಾಲಕೃಷ್ಣ, ಇಕ್ಬಾಲ್ ಹುಸೇನ್, ಶಿವಗಂಗಾ ಬಸವರಾಜ್ ಸೇರಿ ತೆರಳುವ ಸಾಧ್ಯತೆ ಇದೆ. ಆದರೆ, ಈ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿ ಬಾಲಕೃಷ್ಣ ಅವರು ಗುಟ್ಟು ಬಿಟ್ಟುಕೊಟ್ಟಿಲ್ಲ.

ಇತ್ತ, ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಆಪ್ತ ಸಚಿವರು ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಮೂರು ಪ್ರಮುಖ ಅಜೆಂಡಗಳ ಮೇಲೆ ಸಚಿವರ ಡಿನ್ನರ್ ಮೀಟಿಂಗ್ ನಡೆಸಿದ್ದಾರೆಂದು ತಿಳಿದುಬಂದಿದೆ. ಕೆ.ಎನ್.ರಾಜಣ್ಣ, ವೆಂಕಟೇಶ್, ಜಿ.ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ ಭಾಗಿಯಾಗಿದ್ದರು.
ಅಜೆಂಡಗಳೇನು?
* ಹೈಕಮಾಂಡ್ ನಾಯಕರು ಕರೆದು ಮಾತನಾಡುವ ಭರವಸೆ ನೀಡಿದ ಮೇಲೂ ದೆಹಲಿ ಪರೇಡ್ ಅಗತ್ಯ ಎನಿತ್ತು? ಡಿಕೆಶಿ ಬೆಂಬಲಿಗರು ಪಕ್ಷದ ಶಿಸ್ತು ಮೀರಿ ನಡೆದುಕೊಂಡಿದ್ದಾರೆ ಎಂಬುದನ್ನ ಹೈಕಮಾಂಡ್ ಗಮನಕ್ಕೆ ತರಲು ನಿರ್ಧಾರ.
* ಹೈಕಮಾಂಡ್ ಭೇಟಿಗೆ ಡಿಕೆಶಿ ಬಣ ಹೋದಂತೆ ನಾವು ಸದ್ಯಕ್ಕೆ ಹೋಗುವುದು ಬೇಡ. ದೆಹಲಿಗೆ ಹೋಗುವ ಅಗತ್ಯ ಬಿದ್ದರೆ ಸಂಖ್ಯಾಬಲ ಪ್ರದರ್ಶನದ ಲೆಕ್ಕಾಚಾರದಲ್ಲೇ ಹೋಗಲು ಸಿದ್ಧರಾಗೋಣ.
* ಪವರ್ ಶೇರಿಂಗ್ ಇದೆ ಎನ್ನುವುದಾದರೆ ದಲಿತ ಸಿಎಂ ದಾಳ ಮುನ್ನಲೆಗೆ ತರಲು ಚರ್ಚೆ. ನಾವಾಗಿಯೇ ಹೇಳುವುದು ಕೇಳುವುದು ಬೇಡ, ಪವರ್ ಶೇರಿಂಗ್ ಇದೆ ಎಂದರೆ ದಲಿತ ಸಿಎಂ ಮಾಡಿ ಎಂದು ಪಟ್ಟು ಹಿಡಿಯುವ ಬಗ್ಗೆ ಚರ್ಚಿಸಿದ್ದಾರೆಂದು ತಿಳಿದುಬಂದಿದೆ.
