– ಬಿಜೆಪಿಯಿಂದಲೂ ಪ್ರತ್ಯಸ್ತ್ರ
ಬೆಂಗಳೂರು: ಶಾಸಕರ ರಾಜೀನಾಮೆಯ ಕುರಿತು ಸ್ಪೀಕರ್ ರಮೇಶ್ ಕುಮಾರ್ ತೀರ್ಮಾನ ಹೊರ ಬೀಳುವ ಮುನ್ನವೇ ಅತೃಪ್ತರ ಮೇಲೆ ಪ್ರಜಾಪ್ರತಿನಿಧಿ ಕಾಯ್ದೆ 164(1)ಬಿ ಅಸ್ತ್ರ ಬಳಸಲು ಕಾಂಗ್ರೆಸ್, ಕಾನೂನು ಕೋಶದ ಸಲಹೆ-ಸೂಚನೆ ಪಡೆದು ಭಾರೀ ಅಸ್ತ್ರ ಪ್ರಯೋಗಿಸಲು ಸ್ಕೆಚ್ ಹಾಕಿದೆ.
ಬಿಜೆಪಿ ಸೇರಿದರೂ ಸಚಿವ ಸ್ಥಾನ ಸಿಗಬಾರದು ಎಂದು ನೆರೆಯ ತಮಿಳುನಾಡಿನಲ್ಲಿ ಶಾಸಕರ ಅನರ್ಹತೆ ಉಲ್ಲೇಖಿಸಿ ಸ್ಪೀಕರ್ ಗೆ ದೂರು ಕೊಡೋಕೆ ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಏನಿದು ಪ್ರಜಾಪ್ರತಿನಿಧಿ ಕಾಯ್ದೆ 164(1)ಬಿ?
ಪ್ರಜಾಪ್ರತಿನಿಧಿ ಕಾಯ್ದೆ 164(1)ಬಿಯ 10ನೇ ಶೆಡ್ಯೂಲ್‍ನ ಪ್ಯಾರಾಗ್ರಾಫ್ 2ರ ಪ್ರಕಾರ ಅನರ್ಹತೆಗೆ ಕಾಂಗ್ರೆಸ್ ಚಿಂತನೆ ನಡೆಸಿದೆ. ಈ ಕಾಯ್ದೆಯ ಪ್ರಕಾರ ಅನರ್ಹಗೊಳಿಸಿದರೆ ಅತೃಪ್ತರು ಬಿಜೆಪಿಗೆ ಹೋದರೂ ಸಚಿವ ಸ್ಥಾನ ಸಿಗಲ್ಲ. ಈ ಸೆಕ್ಷನ್ ಪ್ರಕಾರ ನ್ಯಾಯಾಲಯದಲ್ಲಿ ತೀರ್ಪು ಬರಬೇಕು. ಇಲ್ಲವೇ, ರಾಜೀನಾಮೆ ಕೊಟ್ಟು ಮರು ಆಯ್ಕೆಯಾಗಬೇಕು.
Advertisement
Advertisement
ಗುಂಪು ಗುಂಪಾಗಿ ರಾಜೀನಾಮೆ, ವಿಮಾನ ಪಯಣ, ಹೇಳಿಕೆಗಳೇ ಪಕ್ಷ ವಿರೋಧಿ ಚಟುವಟಿಕೆ ಇದೆಲ್ಲವೂ ಬಿಜೆಪಿ ಜೊತೆ ಕೈ ಜೋಡಿಸಿರೋದಕ್ಕೆ ಸಾಕ್ಷಿ ಎಂದು ಸ್ಪೀಕರ್‍ಗೆ ದೂರು ಕೊಡಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಸ್ಪೀಕರ್ ಗೆ ದೂರು ಕೊಡುವಾಗಲೂ ಅತೃಪ್ತರಲ್ಲಿ ಬಿರುಕು ಮೂಡಿಸುವಂತೆ ಕಂಪ್ಲೆಂಟ್ ಇರಲಿದೆ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಬಿ.ಸಿ. ಪಾಟೀಲ್ ಮೇಲೆ ಶೆಡ್ಯೂಲ್ 10ರ ಅನ್ವಯ ದೂರು ನೀಡುವ ಮೂಲಕ ಬೆಂಗಳೂರು ಶಾಸಕರ ಮೇಲೆ ಸಾಮಾನ್ಯ ದೂರು ಕೊಟ್ಟು, ಅತೃಪ್ತರಲ್ಲಿ ಬಿರುಕು ಮೂಡಿಸಲೂ ಪ್ಲಾನ್ ಮಾಡಲು ಮುಂದಾಗಿದ್ದಾರೆ. ದೂರು ದಾಖಲಾದಲ್ಲಿ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸೋದು ಅನುಮಾನ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.
ಬಿಜೆಪಿಯಿಂದ ಪ್ರತ್ಯಸ್ತ್ರ:
ಕಾಂಗ್ರೆಸ್ ಪಕ್ಷಾಂತರ ನಿಷೇಧ ಅಸ್ತ್ರಕ್ಕೆ ಬಿಜೆಪಿಯೂ ಪ್ರತ್ಯಸ್ತ್ರ ರೆಡಿ ಮಾಡಿದೆ. ಸರ್ಕಾರದ ಸಂಖ್ಯಾಬಲ ಕುಸಿದಿರೋದ್ರಿಂದ ಈಗ ಬಿಜೆಪಿ ಆಟ ಶುರು ಮಾಡಲು ಸಜ್ಜಾಗಿದೆ. ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ಸಚಿವರ ರಾಜೀನಾಮೆಯಿಂದ ಆಡಳಿತ ಯಂತ್ರ ಕುಸಿದಿದೆ. ರಾಜಕೀಯ ಅರಾಜಕತೆ ಸೃಷ್ಟಿಯಾಗಿದೆ ಎಂದು ರಾಜಭವನ ಚಲೋ ನಡೆಸಿ ರಾಜ್ಯಪಾಲರಿಗೆ ದೂರು ಕೊಡುವ ಸಾಧ್ಯತೆ ಇದೆ.
ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾದ್ರೆ ಕಾಂಗ್ರೆಸ್ ವಿರುದ್ಧ ಬಿಜೆಪಿಯ ಸ್ಪೀಕರ್ ಅಸ್ತ್ರ ಪ್ರಯೋಗಿಸಲಿದ್ದು, ರಾಜೀನಾಮೆ ಕೊಟ್ಟ ತಕ್ಷಣವೇ ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡಬೇಕು. ರಾಜೀನಾಮೆ ಅಂಗಿಕಾರ ಮಾಡದಿದ್ದರೆ ಸ್ಪೀಕರ್ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಬಹುದು. ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ವಿಳಂಬ ಮಾಡಿ ಪಕ್ಷಪಾತ ಮಾಡುತ್ತಿದ್ದಾರೆ ಎಂದು ದೂರು ಕೊಡುವ ಸಾಧ್ಯತೆ ಇದೆ. ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಬಗ್ಗೆ ಕಾನೂನು ತಜ್ಞರ ಜೊತೆಗೂ ಬಿಜೆಪಿ ಚರ್ಚೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.