2019ರಲ್ಲಿ ಮೋದಿ ಸೋಲಿಸಲು ರಾಹುಲ್ ಬಳಿಯಿದೆ ಮೆಗಾ ಬ್ರಹ್ಮಾಸ್ತ್ರ!

Public TV
3 Min Read
rahul gandhi modi donald trump

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರನ್ನು ಸೋಲಿಸಲು ಕಾಂಗ್ರೆಸ್ ರಣ ತಂತ್ರ ರೂಪಿಸುತ್ತಿದ್ದು, ಸೋಷಿಯಲ್ ಮೀಡಿಯಾದ ಮೂಲಕವೇ ತಿರುಗೇಟು ನೀಡಲು ರಾಹುಲ್ ಗಾಂಧಿ ಅಮೆರಿಕದ ಅಧ್ಯಕ್ಷ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪರ ಪ್ರಚಾರ ಕಾರ್ಯನಿರ್ವಹಿಸಿದ್ದ ಕಂಪೆನಿಯನ್ನು ಸಂಪರ್ಕಿಸಿದ್ದಾರೆ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

ಹೌದು. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳನ್ನು ನಿರ್ಲಕ್ಷಿಸಿತ್ತು. ಅಷ್ಟೇ ಅಲ್ಲದೇ ಇವುಗಳಿಂದ ಗ್ರಾಮೀಣ ಭಾಗದಲ್ಲಿ ಮತಗಳು ವಿಭಜನೆ ಆಗುವುದಿಲ್ಲ ಎಂದು ತಿಳಿದುಕೊಂಡಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲುವಿನ ಹಿಂದೆ ಸಾಮಾಜಿಕ ಜಾಲತಾಣದ ಪ್ರಭಾವ ಭಾರೀ ಇದೆ ಎಂದು ತಿಳಿದ ಬಳಿಕ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಈಗ ಅದೇ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿ 2019ರ ಚುನಾವಣೆಯಲ್ಲಿ ತಿರುಗೇಟು ನೀಡಲು ಮುಂದಾಗಿದೆ.

ಇದಕ್ಕೆ ಪೂರಕ ಎಂಬಂತೆ ಈಗಾಗಲೇ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯನ್ನಾಗಿ ನಟಿ ರಮ್ಯಾ ಅವರನ್ನು ನೇಮಿಸಿದ ಬಳಿಕ ಪಕ್ಷದ ಸಾಮಾಜಿಕ ಖಾತೆ ಬಹಳಷ್ಟು ಸಕ್ರಿಯವಾಗಿದೆ. ಕಾಂಗ್ರೆಸ್ ಬಳಕೆ ಮಾಡುತ್ತಿರುವ ಹ್ಯಾಶ್ ಟ್ಯಾಗ್ ಗಳು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಟಾಪಿಕ್ ಆಗುತ್ತಿದೆ. ಈಗ ಬಿಜೆಪಿಗೆ ಮತ್ತಷ್ಟು ತಿರುಗೇಟು ನೀಡಲು ರಾಹುಲ್ ಗಾಂಧಿ ಟ್ರಂಪ್ ಪರ ಕಾರ್ಯನಿರ್ವಹಿಸಿದ್ದ `ಕೇಂಬ್ರಿಡ್ಜ್ ಅನಾಲಿಟಿಕಾ’ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ.

ಕೇಂಬ್ರಿಡ್ಜ್ ಅನಾಲಿಟಿಕಾದ ಸಿಇಒ ಅಲೆಕ್ಸಾಂಡರ್ ನಿಕ್ಸ್ ಚುನಾವಣಾ ರಣತಂತ್ರವನ್ನು ರೂಪಿಸಲು ಈಗಾಗಲೇ ಯುಪಿಎ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ. ಅಷ್ಟೇ ಅಲ್ಲದೇ ಈಗಾಗಲೇ ಈ ಸಂಸ್ಥೆ ಕಾಂಗ್ರೆಸ್‍ಗೆ ನಿರ್ದಿಷ್ಟ ಗುಂಪು, ಸಮುದಾಯಗಳ ಮನ ಮತ್ತು ಮತವನ್ನು ಗೆಲ್ಲುವುದು ಹೇಗೆ ಎನ್ನುವುದರ ಬಗ್ಗೆ ವಿವರಣೆಯನ್ನೂ ನೀಡಿದೆ ಎಂದು ವರದಿ ತಿಳಿಸಿದೆ.

ಕೇಂಬ್ರಿಡ್ಜ್ ಅನಾಲಿಟಿಕಾ ಸಾಧನೆ ಏನು?
ಅಮೆರಿಕದ ಅಧ್ಯಕ್ಷಿಯ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಸುಲಭವಾಗಿ ಜಯಗಳಿಸುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಚುನಾವಣೆ ಹತ್ತಿರ ಹತ್ತಿರ ಬರುತ್ತಿದ್ದಂತೆ ಟ್ರಂಪ್ ಪರ ನಿಧಾನವಾಗಿ ಅಲೆ ಎದ್ದಿತ್ತು. ಆದರೂ ಫಲಿತಾಂಶ ಬಂದಾಗ ಗೆಲುವಿನ ಅಂತರ ಕಡಿಮೆ ಇದ್ದರೂ ಹಿಲರಿ ಕ್ಲಿಂಟನ್ ಗೆಲ್ಲಬಹುದು ಎಂದು ವಿಶ್ಲೇಷಿಸಲಾಗಿತ್ತು. ಆದರೆ ಕೊನೆಗೆ ಚುನಾವಣೆ ಫಲಿತಾಂಶ ಬಂದಾಗ ಟ್ರಂಪ್ ವಿಜಯಿಯಾಗಿದ್ದರು.

ಟ್ರಂಪ್ ಜಯದ ಹಿಂದೆ ಭಾರೀ ಕೆಲಸ ಮಾಡಿದ್ದ ಸಂಸ್ಥೆಯೇ ಈ ಕೇಂಬ್ರಿಡ್ಜ್ ಅನಾಲಿಟಿಕಾ. ಹಿಲರಿ ಕ್ಲಿಂಟನ್ ಅವರ ವೈಫಲ್ಯಗಳನ್ನು ತೋರಿಸಿ ಅಮೆರಿಕದಲ್ಲಿ ಟ್ರಂಪ್ ಪರ ಅಲೆ ಏಳುವಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಿ ಯಶಸ್ವಿಯಾಗಿದ್ದು ಈ ಸಂಸ್ಥೆಯ ಸಾಧನೆ.

ಉದಾಹರಣೆಗೆ ಅಮೆರಿಕದ ಭಾರತೀಯರನ್ನು ಒಲಿಸಲು ಟ್ರಂಪ್ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದರು. ಅಷ್ಟೇ ಅಲ್ಲದೇ ಭಾರತ ಮತ್ತು ಹಿಂದೂ ಸಮುದಾಯ ಶ್ವೇತ ಭವನದ ನಿಜವಾದ ಸ್ನೇಹಿತರು ಎಂದು ಹೇಳಿದ್ದರು. ಹಿಂದಿಯಲ್ಲಿ ಭಾಷಣ ಇತ್ಯಾದಿ ಪ್ರಚಾರ ತಂತ್ರಗಳನ್ನು ತಿಳಿಸಿ ಟ್ರಂಪ್‍ಗೆ ಸಲಹೆ ನೀಡುವ ಮೂಲಕ ಕೇಂಬ್ರಿಡ್ಜ್ ಅನಾಲಿಟಿಕಾ ಭಾರತೀಯರ ಮತ ಪಡೆಯುವಲ್ಲಿ ಯಶಸ್ವಿಯಾಗಿತ್ತು.

ಐತಿಹಾಸಿಕ ಬ್ರೆಕ್ಸಿಟ್ ಜನಮತಗಣೆಯಲ್ಲಿ ಬ್ರಿಟನ್ ಯುರೋಪ್ ಒಕ್ಕೂಟದಿಂದ ಹೊರಬರಲು ಜನಾಭಿಪ್ರಾಯ ರೂಪಿಸುವಲ್ಲೂ ಕೇಂಬ್ರಿಡ್ಜ್ ಅನಾಲಿಟಿಕಾ ಯಶಸ್ವಿಯಾಗಿತ್ತು. ಬ್ರೆಕ್ಸಿಟ್ ಮತ್ತು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕೆಂಬ್ರಿಡ್ಜ್ ಅನಾಲಿಟಿಕಾ ಕಾರ್ಯತಂತ್ರಗಳು ಯಶಸ್ವಿಯಾದ ಹಿನ್ನೆಲೆಯಲ್ಲಿ ಈಗ ವಿಶ್ವದ ಹಲವು ರಾಜಕೀಯ ನಾಯಕರು ಈ ಸಂಸ್ಥೆಯ ನೆರವನ್ನು ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಭಾರತದಲ್ಲಿ ಯಶಸ್ವಿಯಾಗುತ್ತಾ?
ವಿದೇಶಗಳಲ್ಲಿ ಚುನಾವಣೆ ನಡೆದಂತೆ ಭಾರತದಲ್ಲಿ ಚುನಾವಣೆ ನಡೆಯುವುದಿಲ್ಲ. ಇಲ್ಲಿ ದೇಶದ ನಾಯಕರ ಜೊತೆ ರಾಜ್ಯದ ನಾಯಕರ ವರ್ಚಸ್ಸು ಮುಖ್ಯವಾಗುತ್ತದೆ. ಅಷ್ಟೇ ಅಲ್ಲದೇ ಜಾತಿ ಆಧಾರದ ಮೇಲೆ ಟಿಕೆಟ್ ಹಂಚಿಕೆ ಆಗುವುದು ಎಲ್ಲರಿಗೂ ತಿಳಿದಿರುವ ವಿಚಾರ. ಜೊತೆಗೆ ವಿದೇಶದಲ್ಲಿ ಆಂಗ್ಲ ಭಾಷೆಯೇ ಮುಖ್ಯ ಸಂವಹನ ಮಾಧ್ಯಮವಾಗಿದ್ದರೆ ಇಲ್ಲಿ ರಾಜ್ಯಭಾಷೆಯಲ್ಲೂ ಸಂವಹನ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲದೇ ಭಾರತ ಚುನಾವಣಾ ಸಮೀಕ್ಷೆಗಳು ನೀಡುವ ಫಲಿತಾಂಶಕ್ಕೂ ವಿದೇಶಗಳಲ್ಲಿ ನಡೆಯುವ ಚುನಾವಣಾ ಸಮೀಕ್ಷೆಗಳ ಫಲಿತಾಂಶಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಅಮೆರಿಕದ ಚುನಾವಣೆಗಳ ಸಮೀಕ್ಷೆಗಳು ವೈಜ್ಞಾನಿಕವಾಗಿ ನಡೆಯುವುದರ ಜೊತೆಗೆ ನಿಖರವಾಗಿ ಇರುತ್ತದೆ. ಹೀಗಾಗಿ ರಾಹುಲ್ ಗಾಂಧಿಯವರ ಈ ಮೆಗಾ ಬ್ರಹ್ಮಾಸ್ತ್ರ ಯಶಸ್ವಿ ಆಗುತ್ತಾ? ಇಲ್ಲವೋ ಎನ್ನುವ ಪ್ರಶ್ನೆಗೆ 2019ರ ಚುನಾವಣೆಯಲ್ಲಿ ಉತ್ತರ ಸಿಗಲಿದೆ.

 

https://twitter.com/cowgirlup1a/status/916659771247341568

 

Share This Article
Leave a Comment

Leave a Reply

Your email address will not be published. Required fields are marked *