ಬೆಂಗಳೂರು: ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರೇ ಕಾಂಗ್ರೆಸ್ ಶಾಸಕರನ್ನ ಖರೀದಿ ಮಾಡ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B Y Vijayendra) ತಿರುಗೇಟು ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಆಪರೇಷನ್ ಕಮಲ ನಡೆಯುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ (C M Siddaramaiah) ಆರೋಪಕ್ಕೆ ತಿರುಗೇಟು ನೀಡಿ, ಸಿದ್ದರಾಮಯ್ಯ ಅವರು ಗುರುವಾರ ಬಹಳ ಹತಾಶೆಯಿಂದ ಮಾತಾಡಿದ್ದಾರೆ. ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ ಆಮಿಷ ಕೊಡ್ತಿದ್ದಾರೆ ಎಂದು ಹಾಗೂ ಸರ್ಕಾರ ಅಸ್ಥಿರಗೊಳಿಸೋ ಕೆಲಸ ಬಿಜೆಪಿ ಮಾಡ್ತಿದೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ನೇರವಾಗಿ ಬಿಜೆಪಿ ಮೇಲೆ ಆರೋಪ ಮಾಡಿದ್ದಾರೆ. ವಾಸ್ತವವಾಗಿ ಕಾಂಗ್ರೆಸ್‌ನಲ್ಲಿ ಸಿಎಂ ಮತ್ತು ಅವರ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದೆ. ತಮ್ಮ ಕುರ್ಚಿ ಅಲ್ಲಾಡುತ್ತಿದೆ ಎಂದು ಮನಗಂಡು ಆತಂಕದಲ್ಲಿ ಇದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಬಿಷ್ಣೋಯ್ ಗ್ಯಾಂಗ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ದೇಹವನ್ನು 35 ಪೀಸ್ ಮಾಡಿದ್ದ ಆರೋಪಿ ಅಫ್ತಾಬ್
ಕಾಂಗ್ರೆಸ್‌ನಲ್ಲೇ (Congress) ನಾಲ್ಕೈದು ಜನ ಮುಖಂಡರು ಸಿದ್ದರಾಮಯ್ಯ ಅವರನ್ನ ಸಿಎಂ ಸ್ಥಾನದಿಂದ ಇಳಿಸಬೇಕು ಎಂದು ಇದ್ದಾರೆ. ಹೊರಗಡೆಯಿಂದ ಬಂದವರಿಗೆ 5 ವರ್ಷದ ಬಳಿಕ ಮತ್ತೆ ಎರಡು ವರ್ಷ ಆಗಿದೆ ಅಂತ ಹೇಳ್ತಿದ್ದಾರೆ. ಇಷ್ಟೆಲ್ಲ ಭ್ರಷ್ಟಾಚಾರದಿಂದ ಹರಿಯಾಣದಲ್ಲಿ ಗೆಲ್ಲುತ್ತೇವೆ ಅಂತ ಭ್ರಮೆಯಲ್ಲಿ ಇದ್ದರು. ಆದರೆ ರಾಜ್ಯದಲ್ಲಿನ ಭ್ರಷ್ಟಾಚಾರದ ಪರಿಣಾಮ ಹರಿಯಾಣದಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿತು. ಈಗ ಮಹಾರಾಷ್ಟ್ರದಲ್ಲೂ ಸೋಲುತ್ತಾರೆ. ಅವರಿಗೆ ಉಪಚುನಾವಣೆ ಎಲೆಕ್ಷನ್‌ನಲ್ಲಿ ಹಿನ್ನಡೆ ಆಗೋ ಮಾಹಿತಿ ಇದೆ. ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಸಾವಿರಾರು ಕೋಟಿ ಹಿಡಿದುಕೊಂಡು ಕಾಂಗ್ರೆಸ್ ಪಕ್ಷದ ಶಾಸಕರನ್ನ ಖರೀದಿ ಮಾಡ್ತಿದ್ದಾರೆ ಎಂಬ ಮಾಹಿತಿ ನಮಗೆ ಬಂದಿದೆ. ನಮಗೆ ಮಾಹಿತಿ ಬಂದಿದೆ ಎಂದರೆ ಆಡಳಿತ ಪಕ್ಷದ ನಾಯಕರಿಗೆ ಮಾಹಿತಿ ಇಲ್ಲದೆ ಇರುತ್ತಾ? ಹೀಗಾಗಿ ಕಾಂಗ್ರೆಸ್ ಮುಖಂಡರ ಮೇಲೆ ಆರೋಪ ಮಾಡಲು ಸಾಧ್ಯವಾಗದೇ ಬಿಜೆಪಿ ಮೇಲೆ ಗೂಬೆ ಕೂರಿಸೋ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ!
ಸಿದ್ದರಾಮಯ್ಯ ರಾಜೀನಾಮೆ ನೀಡೋದು ಸತ್ಯ. ಸಿದ್ದರಾಮಯ್ಯ ರಾಜೀನಾಮೆ ಕೊಡೋದು ಬಹಳ ಸನ್ನಿಹಿತವಾಗಿದೆ. ಇದರ ಮನವರಿಕೆ ಸಿದ್ದರಾಮಯ್ಯಗೆ ಆಗಿದೆ. ಹೀಗಾಗಿ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ ಸಾವಿರಾರು ಕೋಟಿ ಖರ್ಚು ಮಾಡ್ತಿದ್ದಾರೆ ಎಂಬ ಮಾಹಿತಿ ಸಿಎಂಗೆ ಇದೆ. ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು, ಆಡಳಿತ ಪಕ್ಷದ ಶಾಸಕರ ಖರೀದಿ ಮಾಡುವ ಪ್ರಕ್ರಿಯೆ ಶುರುವಾಗಿದೆ. ಕಾಂಗ್ರೆಸ್‌ನ ಹಿರಿಯ ಮುಖಂಡರೇ ಅದಕ್ಕೆ ಕೈ ಹಾಕಿದ್ದಾರೆ. ಬರುವ ದಿನಗಳಲ್ಲಿ ಕಾಲವೇ ಉತ್ತರ ಕೊಡುತ್ತೆ. ಸಿದ್ದರಾಮಯ್ಯ ರಾಜೀನಾಮೆ ಕೊಡೋದು ನಿಶ್ಚಿತ. ಅದರಲ್ಲಿ ಬದಲಾವಣೆ ಇಲ್ಲ. ಯಾವತ್ತು ರಾಜೀನಾಮೆ ಕೊಡ್ತಾರೆ, ಯಾರು ಬರ್ತಾರೆ ಅನ್ನೋದು ಪ್ರಶ್ನೆ ಅಷ್ಟೆ ಎಂದರು. ಇದನ್ನೂ ಓದಿ: ರಾಹುಲ್ ಹೆಲಿಕಾಪ್ಟರ್ ಟೇಕ್ ಆಫ್‌ಗೆ ಅನುಮತಿ ವಿಳಂಬ – ಎಟಿಸಿ ವಿರುದ್ಧ ಕಾಂಗ್ರೆಸ್ ಕಿಡಿ
ಕುದುರೆ ವ್ಯಾಪಾರ ಕಾಂಗ್ರೆಸ್ ಪಕ್ಷದಲ್ಲೇ ನಡೆಯುತ್ತಿದೆ. ನಮ್ಮಲ್ಲಿ ಇರೋದು 66 ಶಾಸಕರು ಮಾತ್ರ, ಆ ಪ್ರಶ್ನೆ ಉದ್ಭವ ಆಗೊಲ್ಲ. ಸಿದ್ದರಾಮಯ್ಯ ಅವರೇ ಅಕ್ಕಪಕ್ಕದಲ್ಲಿರೋ ಹಿರಿಯ ಸಚಿವರ ಮೇಲೆ ನೀವು ಭಯ ಪಡಬೇಕಿದೆ. ರಾಜೀನಾಮೆ ಕೊಡೋಕೆ ಕಾಲ ಸನ್ನಿಹಿತವಾಗಿದೆ. ಯಾವಾಗ ರಾಜೀನಾಮೆ ಎಂದು ಕಾಂಗ್ರೆಸ್ ಹೈಕಮಾಂಡ್ ನಾಯಕರು ಹೇಗೆ ಚರ್ಚೆ ಮಾಡಿದ್ದಾರೆ ಗೊತ್ತಿಲ್ಲ. ಆದರೆ ರಾಜೀನಾಮೆ ಕೊಡೋದು ಬದಲಾವಣೆ ಆಗೊಲ್ಲ. ಮಹಾರಾಷ್ಟ್ರ (Maharashtra) ಚುನಾವಣೆ ಫಲಿತಾಂಶ ಬಂದ ನಂತರ ಯಾವಾಗಬೇಕಾದ್ರು ತೀರ್ಮಾನ ಆಗುತ್ತೆ. ಸಿದ್ದರಾಮಯ್ಯ ಸಿಎಂ ಆಗಿ ನೂರಕ್ಕೆ ನೂರು ಮುಂದುವರೆಯೊಲ್ಲ. ಬೆಳಗಾವಿ ಅಧಿವೇಶನದವರೆಗೆ ಅವರು ಸಿಎಂ ಆಗಿ ಇರುತ್ತಾರೆ ಎಂದು ನನಗೆ ಅನ್ನಿಸುತ್ತಿಲ್ಲ ಅಂತ ಭವಿಷ್ಯ ನುಡಿದರು. ಇದನ್ನೂ ಓದಿ: 3 ಮಹಿಂದ್ರಾ ಕಾರುಗಳಿಗೆ ಸಿಕ್ತು 5 ಸ್ಟಾರ್ ಸೇಫ್ಟಿ ರೇಟಿಂಗ್