ಬೆಂಗಳೂರು: ಹೇಗಾದ್ರೂ ಮಾಡಿ ಸರ್ಕಾರವನ್ನು ಬೀಳಿಸಿಯೇ ಬಿಡಬೇಕು ಅನ್ನೋ ಹಠಕ್ಕೆ ಬಿದ್ದಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕ್ಷಣಕ್ಕೊಂದು ದಾಳ ಉರುಳಿಸುತ್ತಲೇ ಇದ್ದಾರೆ. ಒಂದು ಪ್ಲ್ಯಾನ್ ಫ್ಲಾಪ್ ಆದ್ರೆ ಮತ್ತೊಂದು. ಈಗ ಮತ್ತೊಂದು ಅಸ್ತ್ರ ಅದೇ ಅವಿಶ್ವಾಸ ನಿರ್ಣಯ.
ಹೌದು. ಈಗಾಗಲೇ ನಾಲ್ವರು ಶಾಸಕರು ಶುಕ್ರವಾರದ ಶಾಸಕಾಂಗ ಸಭೆಗೆ ಗೈರಾಗಿರುವ ಜೊತೆಗೆ ಇನ್ನೂ ಐವರು ಕಾಂಗ್ರೆಸ್‍ನಿಂದ ಜಂಪ್ ಆಗಬಹುದು ಎನ್ನುವ ನಿರೀಕ್ಷೆ ಬಿಜೆಪಿಯದ್ದು. ಬಜೆಟ್ ಅಧಿವೇಶನಕ್ಕೆ ಇನ್ನೂ 15 ದಿನವಿದೆ. ಫೆ. 6ರಿಂದ ಬಜೆಟ್ ಅಧಿವೇಶನ ನಡೆಯಲಿದ್ದು, ಈ ಅವಧಿಯ ಒಳಗಡೆ ಅವಿಶ್ವಾಸ ನಿರ್ಣಯ ಮಂಡಿಸುವ ವೇಳೆ ಸಂಖ್ಯಾ ಬಲವಿಲ್ಲದೇ ಸರ್ಕಾರ ಪತನವಾಗಲಿದೆ ಎನ್ನುವ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ ಎನ್ನಲಾಗಿದೆ. ಇತ್ತ ಹರಿಯಾಣದ ರೆಸಾರ್ಟ್ ನಲ್ಲಿ ಉಳಿದುಕೊಂಡಿರುವ ಬಿಜೆಪಿ ಶಾಸಕರು ಇವತ್ತು ಬೆಂಗಳೂರಿಗೆ ವಾಪಸ್ ಆಗುವ ಸಾಧ್ಯತೆ ಇದೆ.
Advertisement
Advertisement
ಪ್ಲಾನ್ ಬಿ ಏನು?
1. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ರಾಜ್ಯಪಾಲರಿಗೆ ದೂರು ಸಾಧ್ಯತೆ
2. ಈ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಸೂಚಿಸುವಂತೆ ರಾಜ್ಯಪಾಲರಿಗೆ ದುಂಬಾಲು ಸಾಧ್ಯತೆ
3. ಭಾನುವಾರ ಅಥವಾ ಸೋಮವಾರ ರಾಜ್ಯಪಾಲರನ್ನ ಭೇಟಿಯಾಗಿ ಬಿಜೆಪಿ ನಿಯೋಗದಿಂದ ದೂರು ನಿರೀಕ್ಷೆ
4. ಬಂಡೆದ್ದಿರುವ ನಾಲ್ವರು ಕಾಂಗ್ರೆಸ್ ಶಾಸಕರು ಇವತ್ತೇ ರಾಜೀನಾಮೆ ಕೊಡ್ತಾರಾ ಎಂಬುದೇ ಯಕ್ಷ ಪ್ರಶ್ನೆ
5. ಶಾಸಕರು ರಾಜೀನಾಮೆ ಕೊಟ್ಟರೆ ಆಗ ಸರ್ಕಾರ ಬಹುಮತ ಇಲ್ಲ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಬಹುದು
Advertisement
6. ನಾಲ್ವರು ಶಾಸಕರು ರಾಜೀನಾಮೆ ಕೊಟ್ಟರೆ 3ನೇ ಹಂತದಲ್ಲಿ ಇನ್ನಷ್ಟು ಶಾಸಕರಿಂದ ರಾಜೀನಾಮೆ ಕೊಡಿಸಬಹುದು
7. ಬಹುಮತ ಯಾಚನೆ ವೇಳೆ ಶಾಸಕರಿಗೆ ಪಕ್ಷದಿಂದ ವಿಪ್ ಜಾರಿ ಆಗುತ್ತೆ, ಆಗ ಅಡ್ಡ ಮತದಾನಕ್ಕೆ ಅವಕಾಶವಿಲ್ಲ
8. ಒಂದು ವೇಳೆ ವಿಪ್ ಉಲ್ಲಂಘಿಸಿ ಪಕ್ಷಕ್ಕೆ ವಿರುದ್ಧವಾಗಿ ಮತ ಹಾಕಿದ್ರೆ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಅನರ್ಹ
9. ಶಾಸಕರು ಅನರ್ಹಗೊಂಡು 6 ವರ್ಷ ನಿಷೇಧಕ್ಕೆ ಒಳಗಾದರೂ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುವ ಭರವಸೆ
Advertisement
ಪಕ್ಷಾಂತರ ಕಾಯ್ದೆ ಏನು ಹೇಳುತ್ತೆ?
ಪಕ್ಷಾಂತರ ನಿಷೇಧ ಕಾಯ್ದೆಯಡಿ ಪಕ್ಷದ ಆದೇಶ ಉಲ್ಲಂಘಿಸಿದರೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಬಹುದು. ಆಗ ಸಹಜವಾಗಿಯೇ ಶಾಸಕರು ಅನರ್ಹರಾಗುತ್ತಾರೆ. ಅನರ್ಹ ಶಾಸಕರು ವಿಧಾನಸಭೆ ಅವಧಿ ಮುಗಿಯುವವರೆಗೆ ಬೇರೆ ಪಕ್ಷಕ್ಕೆ ಸೇರುವಂತಿಲ್ಲ. ಹಾಲಿ ವಿಧಾನಸಭೆ ಅವಧಿ ಮುಗಿಯುವವರೆಗೂ ಉಪ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ. ಅನರ್ಹಗೊಂಡ ಶಾಸಕರು ಮಂತ್ರಿ ಸ್ಥಾನ ಸೇರಿದಂತೆ ಯಾವುದೇ ಸರ್ಕಾರಿ ಹುದ್ದೆಯನ್ನು ಹೊಂದುವಂತಿಲ್ಲ.
ಅನರ್ಹಗೊಂಡ ದಿನದಿಂದ ಅವರ ಶಾಸಕತ್ವ ಅವಧಿ ಯಾವಾಗ ಮುಗಿಯುತ್ತೋ ಅಲ್ಲಿವರೆಗೆ ಹುದ್ದೆಗಳನ್ನು ಹೊಂದುವಂತಿಲ್ಲ. ಪಕ್ಷದ ಒಟ್ಟು ಶಾಸಕರಲ್ಲಿ 2/3ರಷ್ಟು ಶಾಸಕರು ಗುಂಪಾಗಿ ಪಕ್ಷಾಂತರ ಮಾಡಿದರಷ್ಟೇ ಅನರ್ಹತೆ ಅನ್ವಯಿಸಲ್ಲ. ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ವಿಧಾನಸಭೆ ಸ್ಪೀಕರ್ ಕೈಯಲ್ಲಿದ್ದು, ಅನರ್ಹತೆ ಪ್ರಶ್ನಿಸಿ ಸ್ಪೀಕರ್ ಅವರಿಗೂ ಮನವಿ, ಕಾನೂನು ಹೋರಾಟವನ್ನೂ ಮಾಡಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv