ಬೆಂಗಳೂರು: ಲೋಕಸಭಾ ಚುನಾವಣೆಯ (Lok Sabha Election) ನಂತರ ಕೈ ಪಾಳೆಯದಲ್ಲಿ ಸಿಎಂ ಕುರ್ಚಿ ಕಿತ್ತಾಟ ಆರಂಭವಾಗುತ್ತಾ? ಡಿಕೆ ಶಿವಕುಮಾರ್ (DK Shivakumar) ಆಪ್ತ ಬಣದಿಂದ ಸಿಎಂ ಕಾರ್ಡ್ ಪ್ಲೇ ಆರಂಭವಾಯ್ತಾ ಎಂಬ ಪ್ರಶ್ನೆ ಎದ್ದಿದೆ.
ಹೌದು. ಪರಿಷತ್ ಸದಸ್ಯ ಪುಟ್ಟಣ್ಣ (Puttanna) ನೀಡಿದ ಹೇಳಿಕೆ ಈಗ ಸಂಚಲನ ಸೃಷ್ಟಿಸಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಒಕ್ಕಲಿಗ ಕಾರ್ಡ್ ಪ್ರಯೋಗಕ್ಕೆ ಪರಿಷತ್ ಸದಸ್ಯ ಪುಟ್ಟಣ್ಣ ಮುನ್ನುಡಿ ಬರೆದಿದ್ದಾರೆ. ಪುಟ್ಟಣ್ಣ ಹೇಳಿಕೆಯ ಆಸಲಿಯತ್ತು ಏನು ಎಂಬುದರ ಬಗ್ಗೆ ಈಗ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ನಂತರ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ ಮಧ್ಯೆ ಅಧಿಕಾರ ಹಂಚಿಕೆ ಸೂತ್ರಗಳು ನಡೆದಿದೆ ಎಂಬ ಮಾತುಗಳು ಆಗ ಕೇಳಿ ಬಂದಿತ್ತು. ಆದರೆ ಪಕ್ಷದ ಹೈಕಮಾಂಡ್ ಈ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಸಿದ್ದರಾಮಯ್ಯ ಮುಖ್ಯಮಂತ್ರಿ ಮತ್ತು ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಗಳನ್ನಾಗಿ ನೇಮಿಸಿದ್ದೇವೆ ಎಂದು ಹೇಳಿತ್ತು.
ಈಗ ರಾಮನಗರದಲ್ಲಿ ಪುಟ್ಟಣ್ಣ ಹೇಳಿಕೆಯಿಂದ ಸಿಎಂ ಕುರ್ಚಿ ಕಿತ್ತಾಟಕ್ಕೆ ಮತ್ತಷ್ಟು ಇಂಬು ಸಿಕ್ಕಿದೆ. ಕುರ್ಚಿ ಮೇಲಾಟದ ವಿಚಾರದಕ್ಕೆ ಡಿಕೆಶಿ ಆಪ್ತರು ರಂಗ ಪ್ರವೇಶ ಮಾಡಿ ಬಹಿರಂಗ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಕರ್ನಾಟಕ ಸರ್ಕಾರದ ಅಧಿಕಾರ ಸೂತ್ರ ಏನಾಗಬಹುದು ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಇದನ್ನೂ ಓದಿ: ಕಲ್ಲು ತೂರಾಟ ನಡೆಸಿದವರ ಸವಲತ್ತು ವಾಪಸ್‍ಗೆ ಯತ್ನಾಳ್ ಆಗ್ರಹ
ಈ ಹಿಂದೆ ಮಾತನಾಡಿದ್ದ ಡಿಕೆಶಿ ನಾನು ಎಷ್ಟು ದಿನ ಅಧ್ಯಕ್ಷನಾಗಿ ಇರುತ್ತೇನೆ ಎಂಬುದು ಮುಖ್ಯವಲ್ಲ. ನಾನು ಅಧಿಕಾರ ಬಿಟ್ಟು ಹೋಗುವ ಮುನ್ನ ಪಕ್ಷದ ಸಂಘಟನೆಗೆ ಭದ್ರ ಬುನಾದಿ ಹಾಕಿಕೊಡುವ ಕೆಲಸ ಮಾಡುತ್ತೇನೆ. ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ. ಮುಂದಿನ ಮೂರು ನಾಲ್ಕು ತಿಂಗಳಿನಲ್ಲಿ ಕಾರ್ಯಯೋಜನೆ ಸಿದ್ಧಪಡಿಸುತ್ತೇವೆ. ನೀವೆಲ್ಲರೂ ಅದಕ್ಕೆ ಸಿದ್ಧರಾಗಬೇಕು ಎಂದಿದ್ದರು.
ಪುಟ್ಟಣ್ಣ ಹೇಳಿದ್ದೇನು?
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಶಿವಕುಮಾರ್ ಪಾತ್ರ ಬಹಳಷ್ಟು ದೊಡ್ಡದಿದೆ. ಹಿತ್ತಲ ಬಾಗಿಲಿನಿಂದ ಯಾರ‍್ಯಾರೊ ಬಂದು ಮುಖ್ಯಮಂತ್ರಿಯಾಗಿದ್ದಾರೆ. ಡಿಕೆ ಶಿವಕುಮಾರ್ ಅವರು ನಮ್ಮೂರು ಮನೆಮಗ. ಹಾಗಾಗಿ ಅವರು ಆದಷ್ಟು ಬೇಗ ಸಿಎಂ ಆಗಲಿ ಎಂದು ಆಶಿಸುತ್ತೇನೆ. ಮುಖ್ಯಮಂತ್ರಿಯನ್ನಾಗಿ ಮಾಡುವುದು ಹೈಕಮಾಂಡ್ ತೀರ್ಮಾನ. ನೂರಕ್ಕೆ ನೂರರಷ್ಟು ಡಿಕೆಶಿ ಸಿಎಂ ಆಗುತ್ತಾರೆ.