ಬೆಂಗಳೂರು: ಬಿಜೆಪಿಯವರು ನಪುಂಸಕರು. ನಾವು ಹುಟ್ಟಿಸಿದ ಮಕ್ಕಳನ್ನು ಕರೆದುಕೊಂಡು ಹೋದರು ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನಮ್ಮ 17 ಜನ ಮಕ್ಕಳನ್ನು ಮುಂಬೈಗೆ ಕರೆದುಕೊಂಡು ಹೋಗಿ ಇಟ್ಟಿದ್ದರು. ಈಗ ಅವರೆಲ್ಲ ಬೀದಿ ಪಾಲು ಮಾಡಿದ್ದಾರೆ. ಅವರ ಪರಿಸ್ಥಿತಿ ಅರ್ಹರೂ ಅಲ್ಲ, ಅನರ್ಹರೂ ಅಲ್ಲ ಎನ್ನುವಂತಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮೇಯರ್ ಆಯ್ಕೆ ಮಾಡಲು ಆಗುತ್ತಿಲ್ಲ. ಅಷ್ಟೇ ಯಾಕೆ ಕೇಂದ್ರ ಸರ್ಕಾರದಿಂದ ಕೇವಲ 10 ರೂ. ನೆರೆ ಪರಿಹಾರ ತರಲಿಕ್ಕೆ ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ 25 ಜನ ಬಿಜೆಪಿ ಸಂಸದರು ಇದ್ದಾರೆ. ಹಾಗಿದ್ದರೂ ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ತರುವುದಕ್ಕೆ ಆಗುತ್ತಿಲ್ಲ. ಕರ್ನಾಟಕದ ಮಾನವನ್ನು ದೆಹಲಿಯಲ್ಲಿ ಹರಾಜು ಹಾಕಿದರು. ನಾಚಿಕೆ ಆಗಬೇಕು ಬಿಜೆಪಿಯವರಿಗೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರದ ಖಜಾನೆ ಖಾಲಿಯಾಗಿದೆ. ಆರ್‌ಬಿಐ ನಿಂದ ಇತ್ತೀಚೆಗಷ್ಟೇ 30 ಸಾವಿರ ಕೋಟಿ ರೂ.ಯನ್ನು ಪಡೆದಿದ್ದಾರೆ. ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು, 2019ರ ಮಾರ್ಚ್ ಕಳೆದ ಮೇಲೆ ಜನ ಬೀದಿಗೆ ಬರುತ್ತಾರೆ ಎಂದು ಹೇಳಿದ್ದರು. ಅದರಂತೆ ಈಗ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿದ್ದೆ. ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.