ಬೆಂಗಳೂರು: ಅಮಿತ್ ಶಾ (Amit Shah) ಫೇಕ್ ಎನ್‍ಕೌಂಟರ್‌ಗೆ ಹೆಸರುವಾಸಿ, ಕಾಂಗ್ರೆಸ್ ಪಕ್ಷ ಅಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಎಂಎಲ್‍ಸಿ ಬಿ.ಕೆ ಹರಿಪ್ರಸಾದ್ (B.K.Hariprasad) ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ, ಸಿ.ಟಿ ರವಿ (C.T Ravi) ಅವರನ್ನು ಈ ಸರ್ಕಾರ ಎನ್‍ಕೌಂಟರ್ ಮಾಡೋ ಪ್ರಯತ್ನ ಮಾಡಿತ್ತು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ (Pralhad Joshi) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಜೋಶಿಯವರು ಅಮಿತ್ ಶಾ ಸಂತತಿಯವರು. ಫೇಕ್ ಎನ್‍ಕೌಂಟರ್‌ಗೆ ಹೆಸರುವಾಸಿ ಆದವರು ಅಮಿತ್ ಶಾ. ಅವರು ಹೇಳಿಕೊಟ್ಟ ಪಾಠವನ್ನ ಜೋಶಿಯವರು ಇಲ್ಲಿ ಹೇಳ್ತಿದ್ದಾರೆ. ಬಿಜೆಪಿಯವರು ಮಾಡಿರೋದನ್ನ ಅವರು ಇಲ್ಲಿ ಮಾಡ್ತೀವಿ ಎಂದು ಅಪಾದನೆ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂಬ ಬಿಜೆಪಿ ಆರೋಪದ ವಿಚಾರಕ್ಕೆ, ಬಿಜೆಪಿಯವರು ಸಂಘಪರಿವಾರದವರು ವ್ಯಸನಿಗಳು, ವಿಕೃತರು. ಗಾಂಧಿಯಿಂದ ಹಿಡಿದು ರಾಹುಲ್ ಗಾಂಧಿ ತನಕ ಇವರು ಅಪಪ್ರಚಾರ ಮಾಡಿಕೊಂಡು ಬರ್ತಿದ್ದಾರೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲ. ಬಿಜೆಪಿಯನ್ನು ಬೇರೆ ಅರ್ಥದ ಪಾರ್ಟಿ ಮಾಡೋದಕ್ಕೆ ಇವರು ಹೊರಟಿದ್ದಾರೆ. ರಾಹುಲ್ ಗಾಂಧಿ ಇವರು ಹೇಳಿದ ತರ ಅಡಿಕ್ಟ್ ಆಗಿದ್ದರೆ, 10 ಸಾವಿರ ಕಿಲೋ ಮೀಟರ್ ಭಾರತ್ ಜೋಡೋದಲ್ಲಿ ನಡೆಯೋದಕ್ಕೆ ಆಗುತ್ತಿರಲಿಲ್ಲ. ಈಗ ಅಂಬೇಡ್ಕರ್ ಬಗ್ಗೆಯೂ ಅಪಪ್ರಚಾರ ಮಾಡ್ತಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಲೆಕ್ಕಾಚಾರ ಹಾಕಿಕೊಂಡೇ ಹೇಳಿದ ಮಾತು ಇದು ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿಯವರಿಗೆ (BJP) ದಲಿತರು, ಕೇಳವರ್ಗದವರು, ಶೂದ್ರರು ಯಾರೂ ಬೇಕಾಗಿಲ್ಲ. ಇವರು ಮೇಲ್ವರ್ಗದ ಜೊತೆಗೆ ಇರಬೇಕು ಎಂಬ ಉದ್ದೇಶ. ಅವರಿಗೆ ಕೆಳವರ್ಗದ ಅಭಿವೃದ್ಧಿ ಮಾಡುವುದು ಬೇಕಾಗಿಯೂ ಇಲ್ಲ. ಸುಮ್ಮನೆ ಅಮಿತ್ ಶಾ ಈ ಮಾತು ಹೇಳಿದ್ದಾರೆ ಅಂದುಕೊಳ್ಳಬೇಡಿ. ಇದನ್ನ ಪ್ಲ್ಯಾನ್ ಮಾಡಿಯೇ ಹೇಳಿರೋದು ಎಂದು ಆರೋಪಿಸಿದ್ದಾರೆ.
ಅಮಿತ್ ಶಾ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ಮೊದಲು ಅಂಬೇಡ್ಕರ್ ಬಗ್ಗೆ ಅಪಮಾನ ಮಾಡಿ ಬಳಿಕ ಅದನ್ನ ತಿರುಚೋ ಕೆಲಸ ಮಾಡಿದ್ದಾರೆ. ಅಮಿತ್ ಶಾ ಗುರು ಗೋಲ್ವಾಲ್ಕರ್, ಸಾವರ್ಕರ್ ಯಾವತ್ತು ಮೀಸಲಾತಿ, ತ್ರಿವರ್ಣ ಧ್ವಜ, ಸಂವಿಧಾನವನ್ನ ಒಪ್ಪಿರಲಿಲ್ಲ. ಆರ್‍ಎಸ್‍ಎಸ್ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾಕಿರಲಿಲ್ಲ. ಇದು ಆರ್‍ಎಸ್‍ಎಸ್‍ನ ಹಿಡನ್ ಅಜೆಂಡಾ. ಮುಂದಿನ ವರ್ಷ ಆರ್‍ಎಸ್‍ಎಸ್‍ಗೆ (RSS) 100 ವರ್ಷ ಆಗುತ್ತೆ. ಇದಕ್ಕೆ ಏನಾದರೂ ಮಾಡಬೇಕು ಅಂತ ಹೀಗೆ ಮಾಡ್ತಿದ್ದಾರೆ.
ಅಮಿತ್ ಶಾ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಇಡೀ ದೇಶ, ರಾಜ್ಯದಲ್ಲಿ ಅವರ ಹೇಳಿಕೆ ವಿರುದ್ಧ ಪ್ರತಿಭಟನೆ ಮಾಡ್ತೀವಿ. ಈ ವಾರದಲ್ಲಿ ಎಲ್ಲಾ ಜಿಲ್ಲಾವಾರು ಪ್ರತಿಭಟನೆ ಮಾಡ್ತೀವಿ. ಸೋಮವಾರದಿಂದಲೇ ಹೋರಾಟಗಳು ಪ್ರಾರಂಭ ಆಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.