ಬೆಂಗಳೂರು: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಊಟ ಮಾಡುವ ವಿಷಯಕ್ಕಾಗಿ ಕಿರಿಕ್ ತೆಗೆದು ಯುವಕನೋರ್ವನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಉದ್ಯಮಿ ಲೋಕ್‍ನಾದ್ ಪುತ್ರ ವಿದ್ವತ್ ಹಲ್ಲೆಗೊಳಗಾದ ಯುವಕ. ವಿದ್ವತ್ ಸಿಂಗಪೂರ್‍ನಲ್ಲಿ ಪದವಿ ಮುಗಿಸಿ ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದರು. ಶನಿವಾರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ಊಟ ಮಾಡುವ ವಿಷಯಕ್ಕಾಗಿ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿದೆ. ಹ್ಯಾರಿಸ್ ಅವರ ಪುತ್ರ ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದಾರೆ.
Advertisement
ಹಲ್ಲೆಗೊಳಗಾದ ವಿದ್ವತ್ ರನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ಶಾಸಕರ ಪುತ್ರ ಮತ್ತು ಆತನ ಗ್ಯಾಂಗ್ ಆಸ್ಪತ್ರೆಗೆ ನುಗ್ಗಿ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿದ್ದ ವಿದ್ವತ್ ಸಹೋದರ ಸಾತ್ವಿಕ್ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಇದೀಗ ವಿದ್ವತ್ ಮಲ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಈ ಸಂಬಂಧ ಮಹಮ್ಮದ್ ನಲಪಾಡ್ ಹ್ಯಾರಿಸ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಪ್ರಮುಖ ಆರೋಪಿಯಾಗಿರುವ ಶಾಸಕರ ಪುತ್ರ ಮಹಮ್ಮದ್ ನಲಪಾಡ್ ಪರಾರಿಯಾಗಿದ್ದಾನೆ.
Advertisement
ಈ ಹಿಂದೆ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಶಾಂತಿನಗರದ ಪ್ಲಾನ್ ಬಿ ಪಬ್‍ನಲ್ಲಿ ಗಲಾಟೆ ಮಾಡಿಕೊಂಡಿದ್ದ. ಬೌರಿಂಗ್ ಕ್ಲಬ್‍ನಲ್ಲಿ ಸೆಕ್ಯುರಿಟಿ ಗಾರ್ಡ್‍ಗಳ ಮೇಲೆ ಹಲ್ಲೆ ಮಾಡಿದ್ದ ಎಂಬ ಆರೋಪಗಳು ಕೇಳಿ ಬಂದಿದ್ದವು. ಇಷ್ಟಲ್ಲದೇ ಇಂದಿರಾನಗರದ ಪಬ್‍ವೊಂದರಲ್ಲಿ ಸಹ ಗಲಾಟೆ ಮಾಡಿ ಹ್ಯಾರಿಸ್ ಪುತ್ರ ಸುದ್ದಿಯಾಗಿದ್ದ.
Advertisement
Advertisement
ಶಾಂತಿನಗರ ರೌಡಿಸಂ ಕ್ಷೇತ್ರವಾಗಿ ಬದಲಾಗುತ್ತಿದ್ದು, ಗಾಂಜಾ ಹಾವಳಿ ವಿಪರೀತವಾಗಿದೆ. ಪೊಲೀಸರಿಗೆ ದೂರು ನೀಡಿದ್ರೆ ತೆಗೆದುಕೊಳ್ಳಲು ಹಿಂದೇಟು ಹಾಕ್ತಾರೆ. ಹ್ಯಾರಿಸ್ ಪುತ್ರನ ಮೇಲೆ ಬೌರಿಂಗ್ ಇನ್ಸ್ಟಿಟ್ಯೂಟ್ ಗಲಾಟೆ, ರಿಚ್ಮಂಡ್ ಹೋಟೆಲ್ ಗಲಾಟೆ ಇರಬಹುದು ಯಾವುದೇ ದೂರು ದಾಖಲಾಗಲ್ಲ. ಶಾಸಕರು ತಮ್ಮ ಪ್ರಭಾವ ಬಳಸಿ ಮಗನನ್ನು ರಕ್ಷಣೆ ಮಾಡುತ್ತಿದ್ದಾರೆ. ಪೊಲೀಸರೆಲ್ಲ ಶಾಸಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇಂದು ಸಂಜೆ ಆರು ಗಂಟೆ ಒಳಗಾಗಿ ನಲಪಾಡ್ ನನ್ನ ಬಂಧಿಸದೇ ಹೋದ್ರೆ ಸೋಮವಾರ ಪ್ರತಿಭಟನೆ ಮಾಡ್ತೀವಿ ಅಂತಾ ಬಿಜೆಪಿ ಮುಖಂಡ ವಾಸುದೇವ ಮೂರ್ತಿ ಹೇಳಿದ್ದಾರೆ.