ಬೆಂಗಳೂರು: ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಜೊತೆ ಮಾಯಕೊಂಡ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯ್ಕ್ ಅವರ ಪುತ್ರಿ ಲಕ್ಷ್ಮೀ ನಾಯ್ಕ್ ವಿವಾಹವಾಗಿದ್ದಾರೆ.
ಮಾಸ್ತಿಗುಡಿ ನಿರ್ಮಾಪಕ ಸುಂದರ್ ಹಾಗೂ ಶಾಸಕರ ಪುತ್ರಿ ಕಳೆದ ಆರು ತಿಂಗಳಿನಿಂದ ಪ್ರೀತಿ ಮಾಡುತ್ತಿದ್ದರು. ಶಾಸಕರ ಯಲಹಂಕ ನ್ಯೂಟೌನ್ ಮನೆಯಿಂದ ಪುತ್ರಿ ನಾಪತ್ತೆಯಾಗಿದ್ದು, ಈ ಬಗ್ಗೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರ ಎರಡು ವಿಶೇಷ ತಂಡಗಳಿಂದ ಶಾಸಕರ ಪುತ್ರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು.
ಸುಂದರ್ ಮತ್ತು ಲಕ್ಷ್ಮೀ ನಾಯ್ಕ್ ಇವತ್ತು ಚಾಮುಂಡಿಬೆಟ್ಟದಲ್ಲಿ ಮದ್ವೆಯಾಗಿದ್ದಾರೆ. ಹುಡುಗಿಯ ಪೋಷಕರು ಕೂಡ ಜೊತೆಯಲ್ಲಿಯೇ ಇದ್ದು, ಶಾಸಕರಿಗೆ ಇಷ್ಟವಿಲ್ಲದ ಕಾರಣ ರಾತ್ರಿ ಮನೆ ಬಿಟ್ಟು ಹೋಗಿ, ಇವತ್ತು ಮದುವೆಯಾಗಿದೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದುನಿಯಾ ವಿಜಯ್, ನಾನು ಗೋವಾದಿಂದ ಶೂಟಿಂಗ್ ಮುಗಿಸಿಕೊಂಡು ಬರುತ್ತಿದ್ದೇನೆ. ಇಬ್ಬರೂ ಮದುವೆಯಾಗಿದ್ದಾರೆ. ಇಬ್ಬರೂ ವಯಸ್ಕರಾಗಿದ್ದಾರೆ. ಅದು ಅವರ ಖಾಸಗಿ ನಿರ್ಧಾರ, ಅದನ್ನ ಗೌರವಿಸಬೇಕು. ಆದ್ರೆ ಯುವತಿಯ ಪೋಷಕರು ನಿನ್ನೆಯಿಂದ ಫೋನ್ ಟ್ಯಾಪ್ ಮಾಡಿಕೊಂಡು ಕೂತಿದ್ದಾರೆ. ನನ್ನನ್ನು ಕೂಡ ವಿಮಾನ ನಿಲ್ದಾಣದಲ್ಲೇ ಅರೆಸ್ಟ್ ಮಾಡಲು ಪ್ಲ್ಯಾನ್ ಮಾಡಿದ್ದರು. ಆದ್ರೆ ಅದು ವರ್ಕೌಟ್ ಆಗಲಿಲ್ಲ. ಅವರೇ ಬಂದು ವಿಷಯ ಹೇಳುತ್ತಾರೆ. ಅವರು ಮದುವೆಯಾಗಿರುವುದು ಅವರ ಆಸೆ ಎಂದು ಹೇಳಿದ್ರು.
ಮಗಳ ಬಗ್ಗೆ ಅವ್ರಿಗೂ ಆತಂಕವಿರುತ್ತದೆ. ಅದನ್ನ ಗೌರವಿಸಬೇಕು. ಈಗ ತಾನೇ ಗೋವಾದಿಂದ ಬರುತ್ತಿದ್ದೇನೆ. ಅವರಿಗೆ ಬೆಂಬಲ ನೀಡುತ್ತೇವೆ ಎಂದರು.