– ಮಂತ್ರಿ ಮಾಡುತ್ತೇನೆ ಅಂತಾರೆ ನಾನೇ ಬೇಡ ಅಂತಿದ್ದೇನೆ
– ಧರಂಸಿಂಗ್ ರಾಜಕೀಯ ಗುರುವೆಂದು ಮಲ್ಲಿಕಾರ್ಜುನ ಖರ್ಗೆಗೆ ಟಾಂಗ್ ಕೊಟ್ಟ ಶಾಸಕರು
ಕಲಬುರಗಿ: ನಾನು 50 ಕೋಟಿ ರೂ.ಗೆ ಮಾರಾಟವಾಗಿದೀನಿ ಎನ್ನುವುದು ಸಾಬೀತಾದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಚಿಂಚೋಳಿ ಕಾಂಗ್ರೆಸ್ ಶಾಸಕ ಉಮೇಶ ಜಾಧವ್ ಹೇಳಿದ್ದಾರೆ.
ಜಿಲ್ಲೆಯ ಸಿದ್ದಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಸೇವಾಲಾಲ್ ಜಯಂತಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ಆಪರೇಷನ್ ಕಮಲಕ್ಕೆ ಒಳಗಾಗಿದ್ದೇವೆಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿಬಿಡಲಾಗಿದೆ. ಸ್ಪೀಕರ್ ರಮೇಶ್ ಕುಮಾರ್ ಅವರ ಮೇಲೂ ಇಂತಹ ಆರೋಪ ಬಂದಿದೆ. ಹೀಗಾಗಿ ಅಧಿವೇಶನವೇ ಸರಿಯಾಗಿ ನಡೆಯಲಿಲ್ಲ. ಹಣ ಪಡೆದಿದ್ದೇವೆ ಎನ್ನುವ ಆರೋಪದಿಂದಾಗಿ ಮನಸ್ಸಿಗೆ ತುಂಬಾ ನೋವಾಗಿದೆ. ಇದರಿಂದಾಗಿ ಮಾನಸಿಕವಾಗಿ ನೊಂದಿದ್ದೇವೆ ಎಂದು ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದರು.
ಮಾಜಿ ಮುಖ್ಯಮಂತ್ರಿ ಧರಂಸಿಂಗ್ ತಮ್ಮ ರಾಜಕೀಯ ಗುರು ಎನ್ನುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಈಗ ಕಾಂಗ್ರೆಸ್‍ನಲ್ಲಿ ಇದ್ದೇನೆ ಅಷ್ಟೇ. ಮುಂದೆ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ. ಕಾಂಗ್ರೆಸ್ ನಾಯಕರು ನೋಟಿಸ್ ನೀಡಿದ್ದಾರೆ. ಅದಕ್ಕೆ ಸದ್ಯದಲ್ಲಿಯೇ ಉತ್ತರ ನೀಡುತ್ತೇನೆ. ನನ್ನನ್ನು ಸಮಾಧಾನಪಡಿಸಲು ಮಂತ್ರಿ ಸ್ಥಾನ ನೀಡುತ್ತೇನೆ ಎನ್ನುತ್ತಾರೆ. ಆದರೆ ನಾನೇ ಬೇಡವೆಂದು ಹೇಳುತ್ತಿರುವೆ. ಆಮಿಷಕ್ಕೆ ಒಳಗಾಗದರೆ ಕ್ಷೇತ್ರದ ಅಭಿವೃದ್ಧಿಯಾಗಲ್ಲ ಎಂದು ಮಂತ್ರಿಗಿರಿ ಆಕಾಂಕ್ಷೆಯನ್ನು ವ್ಯಕ್ತಪಡಿಸಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‍ಪಿ) ಸಭೆಗೆ ಗೈರಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು, ನನ್ನ ಪತ್ನಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಆಪರೇಷನ್ ಆಗಿತ್ತು. ಅವರ ಆರೈಕೆ ಮಾಡುವ ಉದ್ದೇಶದಿಂದ ನಾನು ಕೂಡ ಅಲ್ಲಿ ಉಳಿದಿದ್ದೆ. ಇದರಿಂದಾಗಿ ಸಿಎಲ್‍ಪಿ ಸಭೆಗೆ ಹಾಜರಾಗಿಲ್ಲ. ಜನ ನನ್ನನ್ನು ಕಾಂಗ್ರೆಸ್‍ನಿಂದ ಗೆಲ್ಲಿಸಿದ್ದಾರೆ. ಹೀಗಾಗಿ ಬಜೆಟ್ ಅಧಿವೇಶನಕ್ಕೆ ಹೋಗಿ ಬೆಂಬಲ ನೀಡಿ ವಾಪಾಸ್ ಬಂದಿದ್ದೇನೆ ಎಂದು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದರು.
ನಾನು ಲೋಕಸಭಾ ಚುನಾವಣೆಯ ಸ್ಪರ್ಧೆ ಮಾಡುವ ನಿರ್ಧಾರವನ್ನು ಕ್ಷೇತ್ರದ ಜನರಿಗೆ ಬಿಟ್ಟಿದ್ದೇನೆ. ಅವರು ಒಪ್ಪಿಗೆ ನೀಡಿದರೆ ಚುನಾವಣೆ ಎದುರಿಸುತ್ತೇನೆ ಎಂದ ಅವರು, ನಾನು ಕೇಂದ್ರ ಸರ್ಕಾರಿ ಉದ್ಯೋಗದಲ್ಲಿದ್ದೆ. ಆಗ ಮಾಜಿ ಸಿಎಂ ಧರಂಸಿಂಗ್ ಅವರು ನನ್ನನ್ನು ರಾಜಕೀಯಕ್ಕೆ ಕರೆತಂದರು. ನಾನು ಟೈಮ್ ಪಾಸ್ ಮಾಡುವ ರಾಜಕಾರಣಿಯಲ್ಲ. ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕು. ಪ್ರತಿ ನಿಮಿಷವೂ ನಾನು ಕೆಲಸ ಮಾಡುತ್ತಲೇ ಇರಬೇಕು ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ಅವಧಿಯಲ್ಲಿ ನಾನು ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ. ಆದರೆ ಈಗ ಸಮ್ಮಿಶ್ರ ಸರ್ಕಾರ ಬಂದ ಮೇಲೆ ಅಭಿವೃದ್ಧಿಯಾಗುತ್ತಿಲ್ಲ. ಹಿಂದಿನ ಸರ್ಕಾರದ ಕಾಮಗಾರಿಗಳು ಆರಂಭವಾಗುತ್ತಿಲ್ಲ ಎಂದು ದೋಸ್ತಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್‍ನಲ್ಲಿ ಇದ್ದರೂ ಬಿಜೆಪಿಯವರನ್ನು ಕಡೆಗಣಿಸಿಲ್ಲ. ಅಭಿವೃದ್ಧಿ ಮೂಲಕ ಕ್ಷೇತ್ರದ ಜನರಿಗೆ ಸ್ವಾಭಿಮಾನದ ಬದುಕನ್ನು ನೀಡುವುದು ನನ್ನ ಉದ್ದೇಶ. ಈವರೆಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ನನ್ನ ಜೊತೆಗೆ ಮಾತನಾಡಿಲ್ಲ. ನಾನು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv