ಕಲಬುರಗಿ: ಸಮ್ಮಿಶ್ರ ಸರ್ಕಾರಕ್ಕೆ ಆಪರೇಷನ್ ಕಮಲದ ಭೀತಿ ಯಾಕೋ ಕಡಿಮೆ ಆದಂತೆ ಕಾಣಿಸುತ್ತಿಲ್ಲ. ಬಿಜೆಪಿಯ ಸಂಕ್ರಾಂತಿಯ ಮಾಹಾಕ್ರಾಂತಿ ಕೊನೆ ಗಳಿಗೆಯಲ್ಲಿ ವಿಫಲವಾಗಿತ್ತು. ಮೂರು ಹಂತಗಳಲ್ಲಿ ಆಪರೇಷನ್ ಮಾಡಲು ಬಿಜೆಪಿ ಮುಂದಾಗಿತ್ತು. ಪಕ್ಷೇತರ ಶಾಸಕರಿಬ್ಬರು ಮೈತ್ರಿಗೆ ನೀಡಿದ ಬೆಂಬಲ ಹಿಂಪಡೆದುಕೊಳ್ಳುವಂತೆ ಮಾಡಲು ಬಿಜೆಪಿ ಯಶಸ್ವಿಯಾಗಿತ್ತು. ಆದ್ರೆ ಎರಡನೇ ಹಂತದಲ್ಲಿ ಬಿಜೆಪಿ ವಿಫಲವಾಗಿತ್ತು. ಕಾರಣ ಕಾಂಗ್ರೆಸ್ ನ ಎಲ್ಲ ನಾಯಕರು ಅಖಾಡಕ್ಕೆ ಇಳಿದು ತಮ್ಮ ಶಾಸಕರನ್ನು ಕರೆತರುವಲ್ಲಿ ಯಶಸ್ವಿಯಾಗಿತ್ತು. ಇದೀಗ ಅತೃಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಚಿಂಚೊಳ್ಳಿ ಶಾಸಕ ಉಮೇಶ್ ಜಾಧವ್ ಮತ್ತೊಮ್ಮೆ ಬಂಡಾಯದ ಬಾವುಟ ಹಿಡಿಯಲು ತುದಿಗಾಲಲ್ಲಿ ನಿಂತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದ ಉಮೇಶ್ ಜಾಧವ್ ಮುಂಬೈ ರೆಸಾರ್ಟ್ ಸೇರಿಕೊಂಡಿದ್ದರು. ಶಾಸಕಾಂಗ ಸಭೆಗೆ ಗೈರಾಗುವ ಮೊದಲ ಬಾರಿಗೆ ಮೂಲಕ ಬಹಿರಂಗವಾಗಿ ಮೈತ್ರಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಆಪರೇಷನ್ ಕಮಲ ಭೀತಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಎಲ್ಲ ಶಾಸಕರನ್ನು ರೆಸಾರ್ಟಿನಲ್ಲಿ ಇರಿಸಿತ್ತು. ಸಂಕ್ರಾಂತಿ ಬಳಿಕ ಅಜ್ಞಾತ ಸ್ಥಳದಲ್ಲಿ ಉಳಿದುಕೊಂಡಿದ್ದ ಶಾಸಕ ಉಮೇಶ್ ಜಾಧವ್ ಇದೇ ತಿಂಗಳು 24ರಂದು ಸ್ವಕ್ಷೇತ್ರದಲ್ಲಿ ಕಾಣಿಸಿಕೊಂಡು ಸುದ್ದಿಗೋಷ್ಠಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಮೇಶ್ ಜಾಧವ್, ಕಾಂಗ್ರೆಸ್ಸಿನಲ್ಲಿ ವಾತಾವರಣ ಕೆಡುತ್ತಿದೆ. ಯಾರ ಯಾರ ಕ್ಷೇತ್ರಕ್ಕೆ ಮಂತ್ರಿಗಳು ಎಷ್ಟು ಜನ ಬಂದಿದ್ದಾರೆ ಅಂತಾ ನಿಮಗೆ ಗೊತ್ತು. ನನ್ನ ಕ್ಷೇತ್ರದ ಮತದಾರರ ಬಳಿ ಚರ್ಚೆ ಮಾಡಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. ಸದ್ಯ ನನಗೆ ಬೇಸರ ಆಗಿದ್ದ ಹಿನ್ನೆಲೆಯಲ್ಲಿ ನಮ್ಮ ಸಮುದಾಯದ ಮಹಾರಾಜರ ಬಳಿ ಹೋಗಿದ್ದೆ. ನಾನು ಏನು ನಿರ್ಣಯ ತೆಗೆದುಕೊಂಡರೂ ಜನ ನನನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಬಿಜೆಪಿಗೆ ಹೋಗುವುದರ ಬಗ್ಗೆ ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದರು.
ಇದೀಗ ಸ್ವಕ್ಷೇತ್ರದ ಜನರು ಮತ್ತು ಬೆಂಬಲಿಗರು ಕಾಂಗ್ರೆಸ್ ಬಿಡಲು ಗ್ರೀನ್ ಸಿಗ್ನಲ್ ನೀಡಿದ್ದರಿಂದ ಬಿಜೆಪಿ ಸೇರಲು ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡಿದ್ದಾರಂತೆ. ಈಗಾಗಲೇ ಉಮೇಶ್ ಜಾಧವ್, ಕಾಂಗ್ರೆಸ್ ಅತೃಪ್ತ ಬಣದ ಮೂವರು ಶಾಸಕರೊಂದಿಗೆ ಮಾತುಕತೆ ನಡೆಸಿದ್ದು, ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಉಮೇಶ್ ಜಾಧವ್ ಕಮಲ ಹಿಡಿದ್ರೆ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿಯುವುದು ಬಹುತೇಕ ಖಚಿತ. ಈ ಮೂಲಕ ಬಿಜೆಪಿ ಕ್ಷೇತ್ರದ ಬಂಜಾರಾ ಸಮುದಾಯದ ಮತಗಳನ್ನು ಸೆಳೆಯಲು ಯಶಸ್ವಿಯಾದಂತೆ ಆಗುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv