-ಅರಣ್ಯ ಇಲಾಖೆಯಿಂದ ಕೇಸ್ ದಾಖಲು
ರಾಯಚೂರು: ಮಸ್ಕಿ ಕಾಂಗ್ರೆಸ್ ಶಾಸಕ ಬಸನಗೌಡ ತುರವಿಹಾಳ (Basanagouda Turvihal) ಪುತ್ರ ಹಾಗೂ ಸಹೋದರ ಮೊಲ ಬೇಟೆ ಹಾಗೂ ಶಸ್ತ್ರಾಸ್ತ್ರಗಳೊಂದಿಗೆ ಮೆರವಣಿಗೆ ಮಾಡಿದ್ದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ (Wildlife Protection Act) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೊಲಗಳ ಬೇಟೆ ಹಾಗೂ ಬೇಟೆ ಮಾಡಿದ ಉಪಕರಣಗಳ ಪ್ರದರ್ಶನ ಆರೋಪ ಹಿನ್ನೆಲೆ ವನ್ಯಜೀವಿ ಸಂರಕ್ಷಣಾ ಕಾಯಿದೆ 1972, 51, ಸೆಕ್ಷನ್ 9 ಅಡಿಯಲ್ಲಿ ಎ1 ಶಾಸಕರ ಸಹೋದರ ಸಿದ್ದನಗೌಡ, ಎ2 ಶಾಸಕರ ಪುತ್ರ ಸತೀಶ್ ಗೌಡ, ಸ್ಥಳೀಯ ದುರ್ಗೇಶ ಹಾಗೂ ಇತರರ ವಿರುದ್ದ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ:ಬುಧವಾರ ವಕ್ಫ್ ಬಿಲ್ ಮಂಡನೆ – ಬಿಲ್ ಪಾಸ್ ಆಗುತ್ತಾ? ಲೋಕಸಭೆಯಲ್ಲಿ ಬಲಾಬಲ ಹೇಗಿದೆ?
- Advertisement
- Advertisement
ಸಿಂಧನೂರು ತಾಲೂಕಿನ ತುರವಿಹಾಳ ಗ್ರಾಮದಲ್ಲಿ ಯುಗಾದಿ ಹಾಗೂ ಶಂಕರಲಿಂಗೇಶ್ವರ ಜಾತ್ರೆ ಹಿನ್ನೆಲೆ ರಾಯಚೂರಿನ ಮಸ್ಕಿ ಶಾಸಕ ಬಸನಗೌಡ ತುರವಿಹಾಳ ಪುತ್ರ ಹಾಗೂ ಸಹೋದರ ಮೊಲಗಳ ಬೇಟೆಯಾಡಿ, ಬಳಿಕ ಮಾರಕಾಸ್ತ್ರಗಳನ್ನ ಹಿಡಿದು ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದರು. ಪ್ರಾಣಿಗಳನ್ನ ಕೊಂದು ಕಟ್ಟಿಗೆಗೆ ನೇತು ಹಾಕಿ ಮಾರಕಾಸ್ತ್ರ ಹಿಡಿದು ಸಂಭ್ರಮಾಚರಿಸಿದ್ದರು. ಅಲ್ಲದೆ ಯಾವುದೇ ಪಶ್ಚಾತ್ತಾಪವಿಲ್ಲದೆ ಅಟ್ಟಹಾಸದ ವಿಡಿಯೋ, ಫೋಟೋಗಳನ್ನು ವಾಟ್ಸಾಪ್ ಸ್ಟೇಟಸ್‌ಗೆ ಹಾಕಿಕೊಂಡು ಸಂಭ್ರಮಿಸಿದ್ದಾರೆ.
ಈ ಕುರಿತು ಶಾಸಕ ಬಸನಗೌಡ ತುರವಿಹಾಳ ಮಾತನಾಡಿ, ಈ ಘಟನೆಯ ಹೊಣೆಯನ್ನು ಸಾರ್ವಜನಿಕರ ಮೇಲೆ ಹಾಕಿದ್ದಾರೆ. ಮೆರವಣಿಗೆಗೆ ಹೋದಾಗ ಸಾರ್ವಜನಿಕರು ನಮ್ಮ ಸಹೋದರ ಮತ್ತು ಮಗನನ್ನ ಎತ್ತಿಕೊಂಡು ಮೆರವಣಿಗೆ ಮಾಡಿದ್ದಾರೆ. ಅದು ಆಯುಧಗಳಿಗೆ ಪೂಜೆ ಮಾಡುವ ಕಾರ್ಯಕ್ರಮ. ಆಯುಧಗಳನ್ನು ಯಾವುದೇ ಕೆಟ್ಟ ಕಾರ್ಯಕ್ಕೆ ಬಳಸುವಂತದ್ದು ಅಲ್ಲ. ಯಾವ ರೀತಿಯಾಗಿ ಮೊಲಗಳ ಬೇಟೆಯಾಡಿದ್ದಾರೆ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಈ ಕುರಿತು ರಾಯಚೂರು ಡಿಎಫ್‌ಓ ಪ್ರವೀಣ್ ಮಾತನಾಡಿ, ಪ್ರಕರಣದ ತೀವ್ರತೆ ಮೇಲೆ ಕ್ರಮ ಜರುಗಿಸುತ್ತೇವೆ. ಶಾಸಕನ ಸಹೋದರ, ಶಾಸಕನ ಪುತ್ರ ಅಂತೇನೂ ಇಲ್ಲಾ, ಯಾರೇ ತಪ್ಪು ಮಾಡಿದ್ದರೂ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.ಇದನ್ನೂ ಓದಿ:ವಕ್ಫ್ ಮಸೂದೆಯ ಪರ ಮತ ಹಾಕಿ – ಸಂಸದರಿಗೆ ಕೇರಳ ಕ್ಯಾಥೋಲಿಕ್ ಬಿಷಪ್ ಸಂಘಟನೆ ಕರೆ