ಕಲಬುರಗಿ: ಅಮ್ಮಾ ನಾ ಸೇಲ್ ಆದೆ, ಅಪ್ಪಾ ನಾ ಸೇಲ್ ಆದೆ 50 ಕೋಟಿಗೆ ಸೇಲ್ ಆದೆ ಎಂದು ಶಾಸಕ ಎಸ್.ಟಿ.ಸೋಮಶೇಖರ್, ಹಾಡುವ ಮೂಲಕ ಬಿಜೆಪಿ ಮುಖಂಡ ಉಮೇಶ್ ಜಾಧವ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಚಿಂಚೋಳಿ ವಿಧಾನಸಭಾ ಕ್ಷೇತ್ರದ ಚೆಂಗಟಾದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಶಾಸಕರು, ಉಮೇಶ್ ಜಾಧವ್ ಅವರಿಗೆ ತಾಯಿ ಟಿವಿಯಲ್ಲಿ ಮಾರಾಟ ಅಂತ ಬರತ್ತಿದೆ ಏನಾಗಿದೆ ಎಂದು ಕೇಳುತ್ತಾರೆ. ಇದಕ್ಕೆ ಉತ್ತರ ಕೊಡಲು ಆಗದ ಉಮೇಶ್ ಜಾಧವ್ ಅವರು ಹಾಡಿನ ಮೂಲಕ ಅಮ್ಮಾ ನಾ ಸೇಲ್ ಆದೆ. 50 ಕೋಟಿ ರೂ.ಗೆ ಸೇಲ್ ಆದೆ ಅಂತ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಉಮೇಶ್ ಜಾಧವ್ ಗೋಮುಖ ವ್ಯಾಘ್ರ: ದಿನೇಶ್ ಗುಂಡೂರಾವ್
ನಾನು ಸೇಲ್ ಆಗಿದ್ದೇನೆ ಎನ್ನುವ ಬೋರ್ಡ್ ಹಾಕಿಕೊಂಡು ಮನೆಗೆ ಹೋಗುವ ಸನ್ನಿವೇಶ ಉಮೇಶ್ ಜಾಧವ್ ಅವರಿಗೆ ಎದುರಾಗಿದೆ. ಈಗ ಮಗ ಅವಿನಾಶ್ ಜಾಧವ್ ಅವರನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಅಣ್ಣನಿಗೆ ಟಿಕೆಟ್ ತಪ್ಪಿಸಿ ಮಗನಿಗೆ ಕೊಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ಅನೇಕ ಶಾಸಕರು ಮತ್ತೊಂದು ಪಕ್ಷಕ್ಕೆ ಮಾರಾಟವಾಗಿ, ಉಪ ಚುನಾವಣೆಯಲ್ಲಿ ಸೋತರು. ಹೀಗಾಗಿ ಚಿಂಚೋಳಿ ವಿಧಾನಸಭಾ ಉಪ ಚುನಾವಣೆಯಲ್ಲಿ ಉಮೇಶ್ ಜಾಧವ್ ಅವರ ಪುತ್ರ ಗೆಲುವು ಸಾಧಿಸಲ್ಲ ಎನ್ನುವ ಭರವಸೆಯಿದೆ ಎಂದು ಹೇಳಿದರು.