ರಾಜ್ಯ ರಾಜಕೀಯದಲ್ಲಿ ಚೌತಿ ಕ್ರಾಂತಿ – ಗಣಿಧಣಿ ಹಣದ ವ್ಯೂಹಕ್ಕೆ ಸಿಲುಕ್ತಾ ಬಳ್ಳಾರಿ ಕಾಂಗ್ರೆಸ್..?

Public TV
2 Min Read
BLY 1

ಬೆಂಗಳೂರು/ಬಳ್ಳಾರಿ: ಮೈತ್ರಿಕೂಟ ಸರ್ಕಾರ ಕೆಡವಲು ಬಿಜೆಪಿ ಆಪರೇಷನ್ ಕಮಲಕ್ಕೆ ಏನೋ ಕೈ ಹಾಕಿದೆ. ಆದ್ರೆ ಆಪರೇಷನ್ ಕಮಲಕ್ಕೆ ಗುರಿಯಾಗುತ್ತಿರುವ ಕೈ ಶಾಸಕರು ಯಾರ್ಯಾರು ಅನ್ನೋದು ಮಾತ್ರ ಇನ್ನೂ ಸಸ್ಪೆನ್ಸ್ ಆಗಿದೆ.

ಆಪರೇಷನ್ ಕಮಲಕ್ಕೆ ರಣಕಹಳೆ ಊದಿರುವ ಮಾಜಿ ಸಚಿವ, ಶಾಸಕ ಶ್ರೀರಾಮುಲು ಅವರು ಕಾಂಗ್ರೆಸ್ ಶಾಸಕರ ಜೊತೆ ಸತತ ಸಂಪರ್ಕದಲ್ಲಿದ್ದಾರೆ. ಈ ಮಧ್ಯೆ ವಿಶೇಷ ಬೆಳವಣಿಗೆ ಎನ್ನುವಂತೆ ಶ್ರೀರಾಮುಲು ಜೊತೆ ಸಂಪರ್ಕದಲ್ಲಿರುವ ಕೈ ಶಾಸಕರ ಜೊತೆ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಗೌಪ್ಯ ಚರ್ಚೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.

vlcsnap 2018 09 13 07h29m25s99

ಇತ್ತೀಚೆಗಷ್ಟೇ ಪರಮಾಪ್ತ ಶಾಸಕ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವುದಾದರೆ, ಬಿಜೆಪಿಯ ಆಪರೇಷನ್ ಕಮಲದ ಖರ್ಚನ್ನೆಲ್ಲಾ ಸಂಪೂರ್ಣ ವಹಿಸಿಕೊಳ್ಳುವುದಾಗಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪಕ್ಷದ ವರಿಷ್ಠರಿಗೆ ಸಂದೇಶ ರವಾನಿಸಿದ್ದರು ಎನ್ನಲಾಗಿತ್ತು.

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ಸರ್ಕಾರವನ್ನು ಕೆಡವಲು ಬಿಜೆಪಿ ಆಪರೇಷನ್ ಕಮಲಕ್ಕೆ ಕೈ ಹಾಕಲು ಮುಂದಾಗಿತ್ತು. ಆದರೆ ಈ ಆಪರೇಷನ್ ಕಮಲ ಮಾಡಿದಾಗ ಕೈ ಶಾಸಕರಿಗೆ ಕೊಡಬೇಕಾದ ಕೋಟಿ ಕೋಟಿ ಹಣದ ಮೊತ್ತವನ್ನು ತಾವೇ ಭರಿಸುವುದಾಗಿ ಗಣಿಧಣಿ ರೆಡಿಯಾಗಿದ್ದಾರೆ. ಅಲ್ಲದೇ ಆಪರೇಷನ್ ಕಮಲಕ್ಕೆ ಬೇಕಾಗುವ 300 ಕೋಟಿ ರೂಪಾಯಿ ಫಂಡ್ ಅನ್ನು ಕೊಡಲು ಅವರು ಸಿದ್ಧರಾಗಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿತ್ತು.

vlcsnap 2018 09 13 07h28m50s12 e1536804210336

ಯಾವ ಶಾಸಕರು ಜಂಪ್ ಆಗ್ತಾರೆ?
ಸದ್ಯ ವಿದೇಶದಲ್ಲಿರುವ ಮಾಜಿ ಸಚಿವ ಸಂತೋಷ್ ಲಾಡ್ ರೊಂದಿಗೆ ಶ್ರೀರಾಮುಲು ಸತತ ಸಂಪರ್ಕದಲ್ಲಿ ಇದ್ದಾರಂತೆ. ಬಳ್ಳಾರಿಯ 5 ಶಾಸಕರನ್ನ ಸೆಳೆಯಲು ಮುಂದಾಗಿದ್ದಾರಂತೆ. ಸಂತೋಷ್ ಲಾಡ್ ಅವರ ನೇತೃತ್ವದಲ್ಲಿ ಹೊಸಪೇಟೆ ಶಾಸಕ ಆನಂದಸಿಂಗ್, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ, ಜೆಡಿಎಸ್ ತೊರೆದು ಕೈ ಪಾಳಯ ಸೇರಿದ ಹಗರಿಬೊಮ್ಮನಹಳ್ಳಿಯ ಭೀಮಾನಾಯ್ಕ್, ಕಂಪ್ಲಿಯ ಜಿ.ಎನ್.ಗಣೇಶ್, ಸಂಡೂರು ಶಾಸಕ ತುಕಾರಾಂ ಇವರೆಲ್ಲರೂ ಬಿಜೆಪಿಗೆ ತರುವ ಪ್ರಯತ್ನದಲ್ಲಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.

BLY CONGRESS

ಸಚಿವ ರಮೇಶ್ ಜಾರಕಿಹೊಳಿಯೊಂದಿಗೆ ಕೆಲ ಶಾಸಕರು ಬಿಜೆಪಿ ಸೇರ್ಪಡೆಯಾಗೋದು ಖಚಿತವಾದರೆ, ಬಳ್ಳಾರಿ ಜಿಲ್ಲೆಯ 5 ಶಾಸಕರನ್ನ ಸಂತೋಷ್ ಲಾಡ್ ಮೂಲಕವೇ ಬಿಜೆಪಿಗೆ ಕರೆತರಲು ಶ್ರೀರಾಮುಲು ಸಜ್ಜಾಗಿ ನಿಂತಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಹೊಸಪೇಟೆ ಶಾಸಕ ಆನಂದಸಿಂಗ್ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಅಸಮಧಾನಗೊಂಡಿದ್ದಾರಂತೆ. ಕಾಂಗ್ರೆಸ್ ಸೇರ್ಪಡೆ ವೇಳೆ ಸಚಿವ ಸ್ಥಾನದ ಭರವಸೆ ನೀಡಿದ್ದರಂತೆ. ಡಿಕೆ ಶಿವಕುಮಾರ್ ತಮಗೆ ಸಚಿವ ಸ್ಥಾನ ಕೊಡಿಸದ್ದಕ್ಕೆ ಬೇಸರಗೊಂಡು ಆನಂದಸಿಂಗ್ ಚುನಾವಣಾ ನಿವೃತ್ತಿ ಘೋಷಿಸಿದರು ಎಂಬ ಸುದ್ದಿಗಳು ಬಳ್ಳಾರಿ ರಾಜಕಾರಣದಲ್ಲಿ ಹರಿದಾಡುತ್ತಿದ್ದವು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *