ಬೆಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಸಕ ನಾಗೇಂದ್ರ ಅವರು ರಾತ್ರೋರಾತ್ರಿ ಆಸ್ಪತ್ರೆಯಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಸ್ವತಃ ನಾಗೇಂದ್ರ ಅವರೇ ಸ್ಪಷ್ಟನೆ ನೀಡಿದ್ದು, ನಾನು ಎಲ್ಲಿಯೂ ಹೋಗಿಲ್ಲ. ಆಸ್ಪತ್ರೆಯಲ್ಲೇ ಇದ್ದೇನೆ ಎಂದು ಹೇಳಿದ್ದಾರೆ.
ಅನಾರೋಗ್ಯದಿಂದ ಸದನಕ್ಕೆ ಹಾಜರು ಆಗಲು ವಿನಾಯ್ತಿ ಪಡೆದಿದ್ದ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತೆರಳಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಸಚಿವ ಎಂಬಿ ಪಾಟೀಲ್ ಕೂಡ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದು, ನಾನು ಶಾಸಕ ನಾಗೇಂದ್ರ ಅವರೊಂದಿಗೆ ಇದ್ದೇನೆ. ಅವರು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದರು.
ನಗರದ ಆಸ್ಟರ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಾಗೇಂದ್ರ ಅವರು ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರು ಅವರಿಗೆ ಸ್ಟಂಟ್ ಕೂಡ ಅಳವಡಿಸಿದ್ದರು. ವೈದ್ಯರ ಸೂಚನೆ ಮೇರೆಗೆ ಸದನಕ್ಕೆ ಗೈರಾಗಿ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದರು. ಇದರ ನಡುವೆಯೇ ಕಾಂಗ್ರೆಸ್ ಪಕ್ಷದ ನಾಯಕರು ಭಾನುವಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಅತೃಪ್ತ ಶಾಸಕರ ಗುಂಪಿನ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ ನಾಗೇಂದ್ರ ಅವರು ಪಕ್ಷದಲ್ಲೇ ಇರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.