– ಅಲ್ಪಸಂಖ್ಯಾತರಿಗೆ ಕೊಟ್ಟಿರೋದು 4 ಸಾವಿರ ಕೋಟಿ, ಬಜೆಟ್ ಗಾತ್ರ 4 ಲಕ್ಷ ಕೋಟಿ ಎಂದ ಶಾಸಕ
ರಾಮನಗರ: ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಬಂಧನವಾಗಿರುವ ನಟಿ ರನ್ಯಾಗೆ (Ranya Rao) ಕಾಂಗ್ರೆಸ್ ಸಚಿವರು ಬೆಂಬಲ ನೀಡ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ರಾಮನಗರದಲ್ಲಿ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ (HC Balakrishna) ತಿರುಗೇಟು ನೀಡಿದ್ದಾರೆ.
ನಟಿಗೆ ಈ ಹಿಂದೆ ಜಾಗ ಕೊಟ್ಟಿದ್ದೇ ಬಿಜೆಪಿ ಸರ್ಕಾರ. ಕೆಐಎಡಿಬಿಯಿಂದ (KIADB) ಜಾಗ ಕೊಟ್ಟ ಬಿಜೆಪಿ ಈಗ ನಮ್ಮ ವಿರುದ್ಧ ಆರೋಪ ಮಾಡ್ತಿದೆ. ಯಾರಾದ್ರೂ ಬಂದು ಸಹಕಾರ ಕೇಳ್ತಾರೆ. ಸಹಾಯ ಕೇಳಿಕೊಂಡು ಬಂದಾಗ ಯಾರು ಕಳ್ರು, ಯಾರು ಒಳ್ಳೆಯವರು ಗೊತ್ತಾಗಲ್ಲ. ಅವರು ಕದ್ದು ಸಿಕ್ಕಿಬಿದ್ದ ಮೇಲೆ ಕಳ್ಳರು ಅಂತ ಗೊತ್ತಾಗೋದು. ಆ ನಟಿಗೆ ಜಾಗ ಕೊಟ್ಟ ಬಿಜೆಪಿಗೆ ನಮ್ಮ ಮೇಲೆ ಆರೋಪ ಮಾಡುವ ನೈತಿಕತೆ ಇಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡ್ತಿದ್ದಾರೆ. ಅವರು ರಾಜಕೀಯಕ್ಕೆ ಬಂದಿರೋದು ಅಭಿವೃದ್ಧಿ ಮಾಡೋಕಲ್ಲ. ಕೇವಲ ಕ್ಷುಲ್ಲಕ ರಾಜಕಾರಣ ಮಾಡೊದಕ್ಕೆ ಅಷ್ಟೇ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಹೆಚ್.ಸಿ ಬಾಲಕೃಷ್ಣ ಟಾಂಗ್ ನೀಡಿದ್ದಾರೆ.
ಇನ್ನೂ ರಾಜ್ಯ ಬಜೆಟ್ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದ ವಿಚಾರ ಕುರಿತು ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ಅನುದಾನ ಕೊಟ್ಟಿದ್ದಕ್ಕೆ ಬಿಜೆಪಿಯವ್ರು ಪ್ರತಿಭಟನೆ ಮಾಡಿದ್ದಾರೆ. ಅಲ್ಪಸಂಖ್ಯಾತರಿಗೆ ಕೊಟ್ಟಿರೋದು 4 ಸಾವಿರ ಕೋಟಿ, ನಮ್ಮ ಬಜೆಟ್ ಗಾತ್ರ 4 ಲಕ್ಷ ಕೋಟಿ. ಕೇವಲ ಒಂದು ಪರ್ಸೆಂಟ್ ಅಷ್ಟೇ ಕೊಟ್ಟಿದ್ದಕ್ಕೆ ಇವರಿಗೆ ಸಹಿಸಲು ಆಗ್ತಿಲ್ಲ. ಎಲ್ಲಾ ರೀತಿಯ ಅಭಿವೃದ್ಧಿಗೂ ಈ ಬಜೆಟ್ ಪೂರಕ. ಮಾಗಡಿಯಲ್ಲಿ ಆಸ್ಪತ್ರೆ ಅಭಿವೃದ್ಧಿಗೆ 45 ಕೋಟಿ ಹಣ ಕೊಟ್ಟಿದ್ದಾರೆ. ರಸ್ತೆ, ಮಾರುಕಟ್ಟೆ ಅಭಿವೃದ್ಧಿ, ರೇಷ್ಮೆ ಬೆಳೆಗೆ ಪ್ರೋತ್ಸಾಹ ಎಲ್ಲವನ್ನೂ ನಮ್ಮ ಸರ್ಕಾರ ಕೊಟ್ಟಿದೆ. ಮತ ನೀಡಿರೋ ಜನರಿಗೆ ಕೆಲಸ ಮಾಡ್ತಿದ್ದೇವೆ. ನಿಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆಯೂ ಹೇಳಿ ಸರಿ ಮಾಡ್ತೇವೆ. ಕೇವಲ ಜನರನ್ನ ದಿಕ್ಕುತಪ್ಪಿಸುವ ಕೆಲಸವನ್ನ ಬಿಜೆಪಿ ಮಾಡ್ತಿದೆ. ರಾಜ್ಯದಲ್ಲಿ 500 ಕೆಪಿಎಸ್ ಶಾಲೆಗಳನ್ನ ತೆರೆಯಲಾಗ್ತಿದೆ. ನಮ್ಮ ಜಿಲ್ಲೆಗೆ 30 ಪಬ್ಲಿಕ್ ಶಾಲೆಗಳು ಬರುತ್ತೆ. ಗ್ಯಾರಂಟಿ ಜೊತೆಗೆ ಅಭಿವೃದ್ಧಿಗೂ ಹಣ ನೀಡ್ತಿದ್ದೇವೆ ಎಂದು ಬಿಜೆಪಿ ಆರೋಪಕ್ಕೆ ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.
ಇನ್ನೂ ಇದು ಸಿದ್ದರಾಮಯ್ಯನವರ ಕೊನೆಯ ಬಜೆಟ್ ಎಂಬ ಬಿಜೆಪಿ ಟೀಕೆ ವಿಚಾರ ಕುರಿತು ಮಾತನಾಡಿ, ಬಿಜೆಪಿಯವರಿಗೆ ಮಾತನಾಡುವ ತೆವಲು, ಮಾತನಾಡಲಿ. ಇದು ಕೊನೆಯದ್ದೋ ಅಥವಾ ಮೊದಲದ್ದೋ ತೀರ್ಮಾನ ಮಾಡೊದು ನಮ್ಮ ಹೈಕಮಾಂಡ್. ರಾಜ್ಯದಲ್ಲಿ ನಮ್ಮ ಯಜಮಾನಿಕೆ ನಡೆಯುತ್ತಿದೆ. ಈ ಮೂರು ವರ್ಷ ಅಲ್ಲದೇ ಇನ್ನೂ ಐದು ವರ್ಷ ನಮ್ಮ ಯಜಮಾನಿಕೆ ನಡೆಯುತ್ತೆ. ಕಾಂಗ್ರೆಸ್ ನವರು ಯಜಮಾನ ಆಗ್ತಾರೆ, ಯಜಮಾನ ಯಾರು ಅಂತ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಬಾಲಕೃಷ್ಣ ತಿಳಿಸಿದ್ದಾರೆ.