– ರಾಜಕೀಯ ತ್ಯಾಗಕ್ಕೂ ನಾನು ಸಿದ್ಧನಿದ್ದೇನೆ
ವಿಜಯಪುರ: ಗ್ಯಾರಂಟಿ ಯೋಜನೆಗಳಿಂದಾಗಿ (Congress Guarantee) ಅಭಿವೃದ್ಧಿ ಕೆಲಸಗಳಿಗೆ ಅನುದಾನ ಸಿಗುತ್ತಿಲ್ಲ ಎಂದು ಕೆಲ ಕಾಂಗ್ರೆಸ್ ನಾಯಕರು ನೇರವಾಗಿ ಅಸಮಾಧಾನ ಹೊರಹಾಕುತ್ತಿರುವ ಸಂದರ್ಭದಲ್ಲೇ ಈಗ ಅನುದಾನ ವಿಚಾರವನ್ನೇ ಪ್ರಸ್ತಾಪ ಮಾಡಿ ನಾನು ರಾಜಕೀಯ ತ್ಯಾಗಕ್ಕೂ ಸಿದ್ಧ ಎಂದು ಮುದ್ದೇಬಿಹಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ ಎಸ್ ನಾಡಗೌಡ (CS Nadagouda) ನೇರವಾಗಿಯೇ ಹೇಳಿಕೆ ನೀಡಿದ್ದಾರೆ.
ರಾಜ್ಯದ ಹಿಂದುಳಿದ ಕ್ಷೇತ್ರಗಳ ಅಭಿವೃದ್ಧಿ ಮಾಡಬೇಕು. ಇಲ್ಲವಾದರೆ ನಾನು ರಾಜಕೀಯ ತ್ಯಾಗಕ್ಕೂ ಸಿದ್ದ ಎಂದು ಸಿ ಎಸ್ ನಾಡಗೌಡ ಕಾಂಗ್ರೆಸ್ (Congress) ಸರಕಾರದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುದ್ದೇಬಿಹಾಳ ಪಟ್ಟಣದಲ್ಲಿ ಕರ್ನಾಟಕ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷರೂ ಆಗಿರುವ ನಾಡಗೌಡ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಸರ್ಕಾರ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ಕೆಲ ಕ್ಷೇತ್ರಗಳಿಗೆ ಮಾತ್ರ ಹಣ ಬಿಡುಗಡೆಯಾಗಿದೆ. ಅಭಿವೃದ್ಧಿ ಮಾಡಲು ಸರಿಯಾಗಿ ಅನುದಾನ ಸಿಗದೇ ಇದ್ದರೆ ರಾಜಕೀಯ ತ್ಯಾಗಕ್ಕೂ ನಾನು ಸಿದ್ದನಾಗಿದ್ದೇನೆ. ಇದನ್ನು ಬಹಳ ಬಿಚ್ಚು ಮನಸ್ಸಿನಿಂದ ಹೇಳುತ್ತೇನೆ ಎನ್ನುವ ಮೂಲಕ ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸವಾಲು ಸ್ವೀಕರಿಸದ್ದಕ್ಕೆ ನಾನು ರಾಜೀನಾಮೆ ನೀಡಲ್ಲ: ಪ್ರದೀಪ್ ಈಶ್ವರ್
ನಾನು ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಭದ್ದನಾಗಿದ್ದೇನೆ. ಸರ್ಕಾರ ನಿರೀಕ್ಷೆ ಮಾಡಿದ ಮಟ್ಟದಲ್ಲಿ ಸಮರ್ಪಕ ಕರ್ನಾಟಕ ಅಭಿವೃದ್ಧಿ ಮಾಡಬೇಕು. ಮುದ್ದೇಬಿಹಾಳ ಕ್ಷೇತ್ರ ಮಾತ್ರವಲ್ಲ. ಹಿಂದುಳಿದ ಯಾವುದೇ ಕ್ಷೇತ್ರಗಳಿರಲಿ ಸಮರ್ಪಕವಾಗಿ ಸಮತೋಲನ ಮಾಡಿ ಅಭಿವೃದ್ಧಿ ಮಾಡಬೇಕು. ಅಭಿವೃದ್ಧಿ ಮಾಡದಿದ್ದರೆ ನನಗೆ ಮುಂದೆ ರಾಜಕಾರಣ ಮಾಡುವ ಇಚ್ಛೆ ಇಲ್ಲವೆಂದ ಸಿ ಎಸ್ ನಾಡಗೌಡ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ಸ್ಟೈಲ್‌ನಲ್ಲಿ ಕಿಡ್ನಾಪ್‌ಗೈದ ದರ್ಶನ್ ಟೀಂ – ರೇಣುಕಾಸ್ವಾಮಿ ಕೊನೆ ಕ್ಷಣ ಹೇಗಿತ್ತು?
ಹಿಂದುಳಿದ ಪ್ರದೇಶಕ್ಕೆ ಆಗಿರುವಂತಹ ತಾರತಮ್ಯ ಸರಿಪಡಿಸಿ ಅಭಿವೃದ್ಧಿಗೊಳಿಸಬೇಕು. ಹಿಂದುಳಿದ ಎಲ್ಲಾ ಕ್ಷೇತ್ರಗಳು ಅಭಿವೃದ್ಧಿಯಾಗಬೇಕು. ಒಂದು ಕ್ಷೇತ್ರಕ್ಕೆ ಅತೀ ಹೆಚ್ಚು ಹಣ ನೀಡಿ ಭಾರೀ ಕೆಲಸ ಮಾಡಲಾಗಿದೆ ಎನ್ನುವುದು. ಬೇರೆಯವರು ಕೇಳಿದಾಗ ಹಣ ಕೊಡದೇ ಇರುವುದು. ಅಭಿವೃದ್ಧಿಯಿಂದ ಕ್ಷೇತ್ರದ ಜನರನ್ನು ವಂಚಿತ ಮಾಡುವಂತಹ ರಾಜಕೀಯ ಮಾಡುವ ಇಚ್ಛೆ ನನಗಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ (CM Siddaramaiah) ಸರ್ಕಾರ ಹಿಂದುಳಿದ ಕ್ಷೇತ್ರಗಳ ಅಭಿವೃದ್ಧಿಗೆ ಹಣ ನೀಡಿಲ್ಲ ಎಂದು ಪರೋಕ್ಷವಾಗಿ ಆರೋಪ ಮಾಡಿದರು.