ಚಿಕ್ಕಮಗಳೂರು: ತಹಶೀಲ್ದಾರ್ ಹಾಗೂ ಪೊಲೀಸರ ಎದುರೇ ಪಟ್ಟಣ ಪಂಚಾಯಿತಿ ಸದಸ್ಯ ಹಾಗೂ ತಾಲೂಕು ಕಾಂಗ್ರೆಸ್ (Congress) ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಫೀಕ್ ಅಹಮದ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶೃಂಗೇರಿಯಲ್ಲಿ (Sringeri) ನಡೆದಿದೆ.
ರಫೀಕ್ ಶೃಂಗೇರಿಯಲ್ಲಿ ಕಲ್ಲಂಗಡಿ ಹಣ್ಣಿನ ಮಾರಾಟಕ್ಕಾಗಿ ಸರ್ಕಾರದ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿಕೊಂಡಿದ್ದರು. ಈ ಶೆಡ್‍ನ್ನು ತಹಶೀಲ್ದಾರ್ ಹಾಗೂ ಪೊಲೀಸರ ಸಮ್ಮುಖದಲ್ಲಿ ತೆರವು ಮಾಡಲು ಮುಂದಾಗಿದ್ದಾರೆ. ಈ ವೇಳೆ ಅವರ ಎದುರೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಬಡವರು ಬದುಕಿಗಾಗಿ ಶೆಡ್ ನಿರ್ಮಿಸಿಕೊಂಡಿರುವುದೇ ಅಪರಾಧ, ದೊಡ್ಡವರು – ಶ್ರೀಮಂತರು ಕೆರೆ ಒತ್ತುವರಿ ಮಾಡಬಹುದು, ಸೊಪ್ಪಿನ ಬೆಟ್ಟವನ್ನೂ ಒತ್ತುವರಿ ಮಾಡಬಹುದು. ಕೆರೆ ಒತ್ತುವರಿ ಮಾಡಿದ್ರೂ ತಪ್ಪಲ್ಲ. ಅಪಾರ್ಟ್‍ಮೆಂಟ್ ಕಟ್ಟಿದ್ರೂ ತಪ್ಪಲ್ಲ. ಬಡವರು ಬದುಕಿಗಾಗಿ ಶೆಡ್ ಹಾಕಿಕೊಂಡ್ರೆ ತಪ್ಪಾ? ಬಡವರಿಗೊಂದು ಕಾನೂನು, ಶ್ರೀಮಂತರಿಗೊಂದು ಕಾನೂನು ಎಂದು ರಫಿಕ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದವರಿಗೆ ಸರ್ಕಾರದಿಂದ ಯಾವುದೇ ಉಪಯೋಗವಿಲ್ಲ. ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಗೆಲ್ಲಿಸೋದಕ್ಕೆ ನಾವು ಜೀವ ತೇಯ್ದಿದ್ದೇವೆ. ಆದರೆ, ಅವರು ಯಾವ ಸಹಾಯ ಮಾಡಿಲ್ಲ. ಏನೂ ಹೇಳಿಲ್ಲ, ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ವಿಷ ಕುಡಿದಿದ್ದಾರೆ. ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.