– ಪತ್ನಿ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು: ಸದಾ ರಾಜಕೀಯ ಹಾಗೂ ಸಾರ್ವಜನಿಕ ಜೀವನದ ನಡುವೆ ಇದ್ದು, ತಮ್ಮ ಫ್ಯಾಮಿಲಿ ಸದಸ್ಯರಿಂದ ದೂರ ಇರುವ ಕುರಿತು ಕಾಂಗ್ರೆಸ್ ನಾಯಕರು ಔಪಚಾರಿಕವಾಗಿ ಮಾತುಕತೆ ನಡೆಸಿರುವ ಸಂದರ್ಶನದ ವೀಡಿಯೋ ರಿವೀಲ್ ಆಗಿದೆ.
Advertisement
ಸಿದ್ದರಾಮಯ್ಯ ಅವರು ಈಗ ರಾಜ್ಯದ ಮುಖ್ಯಮಂತ್ರಿ. ಅವರ ಧರ್ಮಪತ್ನಿ ವಿಚಾರವಾಗಿ ಸ್ವತಃ ತಮ್ಮ ಪಕ್ಷದ ನಾಯಕರೇ ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಿ ಸಿಎಂ ಅವರಿಂದ ಉತ್ತರ ಪಡೆದಿದ್ದಾರೆ. ಸಿಎಂ ಜೊತೆ ಇತರೆ ನಾಯಕರು ನಡೆಸಿದ ಸಂದರ್ಶನ ನಡೆಸಿದ್ದು ವಿಶೇಷವಾಗಿತ್ತು.
Advertisement
Advertisement
ಸರ್.. ನೀವು 80% ರಾಜಕಾರಣ, ಸಾಮಾಜಿಕ ಬದ್ಧತೆ ದೃಷ್ಟಿಯಿಂದ ಕೆಲಸ ಮಾಡುತ್ತೀರಿ. ಇದರ ಮಧ್ಯೆ ನಿಮ್ಮ ಫ್ಯಾಮಿಲಿಗೂ ಸಮಯ ಕೊಡುತ್ತೀರಾ? ಅವರ ಜೊತೆ ಎಂಜಾಯ್ ಮಾಡ್ತೀರಾ ಎಂದು ಮೊದಲಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಫ್ಯಾಮಿಲಿಗೆ ನಾನು ಸಮಯ ಕೊಟ್ಟಿರುವುದು ತುಂಬಾ ಕಡಿಮೆ. ನಾವು ಸಾರ್ವಜನಿಕ ಕ್ಷೇತ್ರದಲ್ಲಿ ಇರುವಾಗ, ಇಡೀ ಸಮಾಜವೇ ನಮ್ಮ ಫ್ಯಾಮಿಲಿ. ನನಗೆ ಸಮಯ ಸಿಗೋದಿಲ್ಲ ಕೊಡಲಿಕ್ಕೆ ಎಂದು ಪ್ರತಿಕ್ರಿಯಿಸಿದರು.
Advertisement
‘ಒಬ್ಬ ಒಳ್ಳೆ ಸಾರ್ವಜನಿಕ ವ್ಯಕ್ತಿಯಾಗಬೇಕಾದರೆ, ರಾಜಕಾರಣದಲ್ಲಿ ಇರಬೇಕಾದರೆ ಮದುವೆಯಾಗಬೇಡಿ’ ಎಂದು ಲೋಹಿಯಾ ಹೇಳಿದ್ದರು. ನಿಮ್ಮನ್ನು ನೀವು ಸಮಾಜಕ್ಕೆ ಅರ್ಪಣೆ ಮಾಡಿಕೊಳ್ಳಬೇಕು ಎಂದರೆ ಮದುವೆಯಾಗಬಾರದು ಎಂಬ ಮಾತನ್ನು ಸಿಎಂ ನೆನಪಿಸಿಕೊಂಡರು.
ಸರ್.. ನಿಮ್ಮ ಧರ್ಮಪತ್ನಿಯನ್ನ ಒಮ್ಮೆಯಾದರು ಪರಿಚಯ ಮಾಡಿಸಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಲಾಷೆ ವ್ಯಕ್ತಪಡಿಸಿದರು. ಇದಕ್ಕೆ ಮಧ್ಯೆ ಪ್ರವೇಶಿಸಿದ ಸಚಿವ ಎಂ.ಸಿ.ಸುಧಾಕರ್, ನಿಮ್ಮ ಹೋಂ ಮಿನಿಸ್ಟರ್ ಅವರನ್ನು ಗೃಹ ಬಂಧನದಲ್ಲಿ ಯಾಕೆ ಇಟ್ಟಿದ್ದೀರಾ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾವು ಅವರಿಗೆ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಬಾ ಎಂದು ಕೂಗಿದ್ದೆ. ಆದರೆ ಬರಲಿಲ್ಲ. ಏನ್ ಮಾಡೋಕೆ ಆಗುತ್ತೆ. ಅವರನ್ನು ಹೇಗೆ ಒತ್ತಾಯಿಸಲಿ ಎಂದು ಸಿದ್ದರಾಮಯ್ಯ ಹೇಳಿದರು.
ನಾನು 1977 ರಲ್ಲಿ ಮದುವೆಯಾದೆ. ಅದರ ಮಾರನೇ ವರ್ಷವೇ ತಾಲ್ಲೂಕು ಬೋರ್ಡ್ ಸದಸ್ಯನಾದೆ. ರಾಜಕೀಯಕ್ಕೆ ಹೆಚ್ಚು ಸಮಯ ಕೊಡುವ ಪರಿಪಾಠ ನನ್ನಲ್ಲಿ ಮೊದಲಿನಿಂದಲೂ ಬೆಳೆದುಕೊಂಡು ಬಂತು ಎಂದು ಸಿದ್ದರಾಮಯ್ಯ ತಿಳಿಸಿದರು. ಈ ವೇಳೆ ಮಧ್ಯೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜಕೀಯದ್ದು ಅದೊಂದೇ ಸಮಸ್ಯೆ. ಫ್ಯಾಮಿಲಿಗೆ ಟೈಂ ಕೊಡೋದಕ್ಕೆ ಆಗುವುದೇ ಇಲ್ಲ ಎಂದು ನುಡಿದರು. ಈ ವೇಳೆ ಎಲ್ಲರೂ ದನಿಗೂಡಿಸಿ, ಸರ್.. ನಿಮ್ಮ ಧರ್ಮಪತ್ನಿಯನ್ನು ನಮಗೆ ಭೇಟಿ ಮಾಡಿಸಬೇಕು ಎಂದು ಒತ್ತಾಯಿಸಿದರು. ಅದಕ್ಕೆ ಸಿದ್ದರಾಮಯ್ಯ, ಪ್ರಯತ್ನಿಸುತ್ತೇನೆ ಎಂದು ಉತ್ತರ ಕೊಟ್ಟರು.
ಸಂದರ್ಶನದ ವೇಳೆ ಸಚಿವರಾದ ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ, ಶಿವರಾಜ್ ತಂಗಡಗಿ, ಜಮೀರ್ ಅಹ್ಮದ್ ಕೂಡ ಇದ್ದರು.