-ವಿಜಯಾನಂದ ಕಾಶಪ್ಪನವರ್ ಪತ್ನಿ ವರ್ಸಸ್ ಹುಲ್ಲಪ್ಪ ಮೇಟಿ ಪುತ್ರಿ
ಬಾಗಲಕೋಟೆ: ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯ ಕಾಂಗ್ರೆಸ್‍ನ ನಾಯಕರಲ್ಲಿ ಭಿನ್ನಮತ ಸೃಷ್ಟಿಯಾಗಿದ್ದು, ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‍ನಲ್ಲೂ ಭಿನ್ನಮತ ಸ್ಫೋಟಗೊಂಡಿದೆ. ಜಿಲ್ಲಾಪಂಚಾಯಿತಿ ಅಧ್ಯಕ್ಷಗಿರಿಗಾಗಿ ಇಬ್ಬರು ಪ್ರತಿಷ್ಠಿತರ ನಡುವೆ ಕಾಳಗ ಶುರುವಾಗಿದ್ದು, ಕಾಂಗ್ರೆಸ್ಸಿಗರ ನಡೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಇರಿಸು-ಮುರಿಸು ಅನುಭವಿಸುವಂತಾಗಿದೆ.
ಹಾಲಿ ಜಿಲ್ಲಾಪಂಚಾಯಿತಿ ಅಧ್ಯಕ್ಷೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್ ಅವರನ್ನ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ಸಿಗರಿಂದಲೇ ಸ್ಕೆಚ್ ರೆಡಿಯಾಗಿದೆ. ಶತಾಯ ಗತಾಯ ಅಧಿಕಾರದ ಗದ್ದುಗೆ ಹೀಡಿಯಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಮಾಜಿ ಸಚಿವ ಎಚ್.ವೈ.ಮೇಟಿ ಪುತ್ರಿ ಬಾಯಕ್ಕಾ ಮೇಟಿ ಬಂಡಾಯದ ಬಾವುಟ ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ವೀಣಾ ಕಾಶಪ್ಪನವರ್ ಅವರನ್ನ ಕೆಳಗಿಳಿಸಬೇಕು, ಇಲ್ಲವಾದಲ್ಲಿ ಬಿಜೆಪಿ ಸದಸ್ಯರ ಜೊತೆ ಕೈ ಜೋಡಿಸಿ ಅಧ್ಯಕ್ಷಗಿರಿ ಪಟ್ಟ ಪಡೆಯುವುದಾಗಿ ಬಾಯಕ್ಕಾ ಮೇಟಿ ಪಟ್ಟು ಹಿಡಿದಿದ್ದಾರೆ. ಅಲ್ಲದೆ ಬಾಯಕ್ಕಾ ಮೇಟಿ ಬಿಜೆಪಿಗರನ್ನ ತಮ್ಮ 9 ಜನ ಜಿಲ್ಲಾಪಂಚಾಯಿತಿ ಸದಸ್ಯರ ಜೊತೆ ಸಂಪರ್ಕಿಸಿದ್ದಾರೆ. ಮೇಟಿಯವರ ಪುತ್ರಿಯ ನಡೆ ಈಗ ಬಾದಾಮಿ ಶಾಸಕರು ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಇರುಸು-ಮುರುಸು ಉಂಟು ಮಾಡಿದೆ. ಕಳೆದ ಬಾರಿ ಜಿಲ್ಲಾ ಪಂಚಾಯಿತಿ ಚುನಾವಣೆ ಬಳಿಕ ಒಟ್ಟು ಜಿಲ್ಲೆಯ 36 ಸ್ಥಾನಗಳಲ್ಲಿ ಕೇವಲ 17 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಬಿಜೆಪಿ 18ರಲ್ಲಿ ಜಯಭೇರಿ ಬಾರಿಸಿತ್ತು. ಆದ್ರೆ ಕಾಂಗ್ರೆಸ್‍ನ ಒಬ್ಬರು ಪಕ್ಷೇತರರ ಬೆಂಬಲ ಪಡೆದು ಹಾಗೂ ಇನ್ನೊಬ್ಬ ಬಿಜೆಪಿ ಸದಸ್ಯರ ಗೈರು ಉಳಿಸುವುದರ ಮೂಲಕ ಅಧ್ಯಕ್ಷಗಿರಿ ಪಟ್ಟ ಗಿಟ್ಟಿಸಿಕೊಂಡಿದ್ದರು.
ಜಿಲ್ಲಾ ಕಾಂಗ್ರೆಸ್‍ನಲ್ಲಿ ಈ ಬೆಳವಣಿಗೆ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿದ್ದು, ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಗಳಲ್ಲಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ವಿರುದ್ಧ ಕೆಲವು ಸದಸ್ಯರು ಹರಿಹಾಯುತ್ತ ಬಂದಿದ್ದಾರೆ. ಸಾಮಾನ್ಯ ಸಭೆಗಳು ಸರಿಯಾಗಿ ನಡೆದ ಉದಾಹರಣೆಗಳಿಲ್ಲ. ಅಧ್ಯಕ್ಷ ಪಟ್ಟಕ್ಕೆ ಕುಳಿತು ಎರಡೂವರೆ ವರ್ಷಗಳಾಗಿದ್ದು, ಹೀಗಾಗಿ ಮತ್ತೊಬ್ಬರಿಗೆ ಅವಕಾಶ ಕೊಡಿ ಎಂದು ಬಾಯಕ್ಕಾ ಮೇಟಿ ಪಟ್ಟು ಹಿಡಿದಿದ್ದಾರಂತೆ. ಅಲ್ಲದೇ ಹಾಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಬಾಗಲಕೋಟೆ ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದು, ಲೋಕಸಭೆ ಟಿಕೆಟ್ ನೀಡಿ, ಅಧ್ಯಕ್ಷೆ ಸ್ಥಾನವನ್ನು ತ್ಯಜಿಸುತ್ತೇನೆ ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಪಕ್ಷದ ವರಿಷ್ಠರು ಏನೇ ತೀರ್ಮಾಣ ತೆಗೆದುಕೊಂಡರೂ ಬದ್ಧ ಎಂದು ಇಬ್ಬರು ನಾಯಕಿಯರು ಮೇಲ್ನೋಟಕ್ಕೆ ಹೇಳುತ್ತಿದ್ದರೂ, ಆಂತರಿಕ ಕಲಹ ಮಾತ್ರ ಶಮನಗೊಂಡಿಲ್ಲ. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಪಕ್ಷ ವಿರೋಧಿ ಚಟುವಟಿಕೆ ಮಾಡುವವರಿಗೆ ಶಿಸ್ತು ಕ್ರಮ ಕಟ್ಟಿಟ್ಟ ಬುತ್ತಿ ಎಂದು ಬಾಯಕ್ಕಾ ಮೇಟಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಅದೇನೆಯಾಗಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಿರಿ ಪಟ್ಟ ಕಾಂಗ್ರೆಸ್ ಪಾಳಯದಲ್ಲಿ ಬಹುದೊಡ್ಡ ಬಿರುಗಾಳಿ ಎಬ್ಬಿಸಿದೆ. ಲೋಕಸಭೆ ಚುನಾವಣೆ ಸಮೀಪವಿರುವಾಗ್ಲೇ ಈ ಬೆಳವಣಿಗೆ ವರಿಷ್ಠರ ತಲೆ ನೋವಿಗೆ ಕಾರಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv