ಹಾವೇರಿ: ಜಿಲ್ಲಾ ಪಂಚಾಯತ್ ನಲ್ಲಿ ಕಾಂಗ್ರೆಸ್ ಸದಸ್ಯರುಗಳ ನಡುವೆಯೇ ಮುಸುಕಿನ ಗುದ್ದಾಟ ಶುರುವಾಗಿದ್ದು, ಇದರಿಂದಾಗಿ ಅಭಿವೃದ್ಧಿಗಾಗಿ ಬಂದಿದ್ದ ಹಣ ಮರಳಿ ಸರ್ಕಾರಕ್ಕೆ ಹಿಂದಿರುಗಿ ಹೋಗಿದೆ.
ಜಿಲ್ಲೆಯ ಜಿಲ್ಲಾ ಪಂಚಾಯತ್ ನಲ್ಲಿ ಬಹುಮತ ಪಡೆದಿರುವ ಕಾಂಗ್ರೆಸ್ ಸದಸ್ಯರುಗಳ ನಡುವೆಯೇ ಮುಸುಕಿನ ಗುದ್ದಾಟ ಶುರುವಾಗಿದೆ. ಸದಸ್ಯರುಗಳು ತಮ್ಮ ಪಕ್ಷದವರೇ ಆಗಿರುವ ಅಧ್ಯಕ್ಷರನ್ನು ಕೆಳಗಿಳಿಸಬೇಕು ಎಂಬ ಹಠಕ್ಕೆ ಬಿದ್ದಿದ್ದು, ಯಾವುದೇ ಸಭೆ ನಡೆಯದಂತೆ ಮಾಡುತ್ತಿದ್ದಾರೆ. ಕೈ ಸದಸ್ಯರುಗಳ ಶೀತಲ ಸಮರದಿಂದಾಗಿ ಜಿಲ್ಲೆಯ ಅಭಿವೃದ್ಧಿಗಾಗಿ ಬಂದಿದ್ದ ಹಣ ವಾಪಸ್ಸು ಸರ್ಕಾರಕ್ಕೆ ಮರಳಿದೆ.
Advertisement
Advertisement
ಜಿಲ್ಲಾ ಪಂಚಾಯತ್ ಒಟ್ಟು 34 ಸದಸ್ಯರ ಬಲ ಹೊಂದಿದೆ. ಇಲ್ಲಿ 22 ಸದಸ್ಯರನ್ನ ಹೊಂದಿರುವ ಕಾಂಗ್ರೆಸ್ ಅಧಿಕಾರ ನಡೆಸುತ್ತಿದೆ. ಕಾಂಗ್ರೆಸ್ ನ ಕೊಟ್ರೇಶಪ್ಪ ಬಸೇಗಣ್ಣಿ ಕಳೆದ 3 ವರ್ಷಗಳಿಂದ ಅಧ್ಯಕ್ಷರಾಗಿ ಅಧಿಕಾರ ನಡೆಸುತ್ತಿದ್ದಾರೆ. ಉಳಿದ ಕಾಂಗ್ರೆಸ್ ಸದಸ್ಯರು ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಮಾಜಿ ಸಚಿವ ಎಚ್ ಕೆ ಪಾಟೀಲರ ಆಪ್ತನಾಗಿರುವ ಕೊಟ್ರೇಶಪ್ಪನವರು ಮಾತ್ರ ಅಧಿಕಾರ ಬಿಟ್ಟುಕೊಡುತ್ತಿಲ್ಲ. ಹೀಗಾಗಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಗೆ ಬಹುತೇಕ ಕಾಂಗ್ರೆಸ್ ಸದಸ್ಯರು ಹಾಜರಾಗುತ್ತಿಲ್ಲ. ಸಾಮಾನ್ಯ ಸಭೆಗೆ ಕೋರಂ ಅಭಾವ ಸೃಷ್ಟಿಸಿ ಸಭೆ ನಡೆಯದಂತೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಇದರಿಂದಾಗಿ ಜಿಲ್ಲೆಯಲ್ಲಿನ ಯಾವುದೇ ಅಭಿವೃದ್ಧಿ ಕೆಲಸ-ಕಾರ್ಯಗಳಿಗೆ ಹಣ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಜಿಲ್ಲಾ ಪಂಚಾಯತ್ ಗೆ ಅಭಿವೃದ್ಧಿಗಾಗಿ ಸರ್ಕಾರದಿಂದ ಕೋಟಿ ಕೋಟಿ ಹಣ ಬಿಡುಗಡೆಯಾಗಿದೆ. ಆದರೆ ಸಭೆಯಲ್ಲಿ ಅನುಮೋದನೆ ಸಿಗದೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಬಂದಿದ್ದ ಹಣ ಸರ್ಕಾರಕ್ಕೆ ವಾಪಸ್ ಹೋಗಿದೆ. ಗುರುವಾರವು ಸಹ ಕೈ ಸದಸ್ಯರು ಸಭೆಗೆ ಗೈರಾಗಿದ್ದರಿಂದ ತಮಿಳುನಾಡು ಮಾಜಿ ಸಿಎಂ ಕರುಣಾನಿಧಿಯವರ ನಿಧನಕ್ಕೆ ಸಂತಾಪ ಸೂಚಿಸಿ ಸಭೆಯನ್ನು ಪುನಃ ಮತ್ತೊಮ್ಮೆ ಮುಂದೂಡಿದ್ದಾರೆ. ಸಭೆಯನ್ನು ಪದೇ ಪದೇ ಮುಂದೂಡುತ್ತಿರುವುದಕ್ಕೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
ಜಿಲ್ಲಾ ಪಂಚಾಯತ್ ಗೆ ವಿವಿಧ ಯೋಜನೆಗಳಿಗೆಂದು ಕೋಟಿ ಕೋಟಿ ಹಣ ಬಂದಿದೆ. ಅಲ್ಲದೇ ಯಾವುದೇ ಕೆಲಸಗಳಿಗೆ ಹಣ ನೀಡಬೇಕೆಂದರೆ ಜಿಲ್ಲಾ ಪಂಚಾಯತ್ ನಲ್ಲಿ ಸಾಮಾನ್ಯ ಸಭೆ ಹಾಗೂ ಸ್ಥಾಯಿ ಸಮಿತಿ ಸಭೆಯಲ್ಲಿ ಯೋಜನೆಗಳಿಗೆ ಅನುಮೋದನೆ ಪಡೆದುಕೊಳ್ಳಬೇಕು. ಆದರೆ ಕಳೆದ ಎರಡು-ಮೂರು ತಿಂಗಳಿನಿಂದ ಕಾಂಗ್ರೆಸ್ ಸದಸ್ಯರ ಮುಸುಕಿನ ಗುದ್ದಾಟದಿಂದಾಗಿ ಯಾವುದೇ ಅನುಮೋದನೆಗಳು ಜಾರಿಯಾಗುತ್ತಿಲ್ಲ.
ಅಧ್ಯಕ್ಷನ ವಿರುದ್ಧ ರೋಸಿ ಹೋಗಿರುವ ಕೈ ಸದಸ್ಯರು ಸಭೆಗೆ ಗೈರಾಗುವುದರಿಂದ ಪದೇ ಪದೇ ಕೋರಂ ಕೊರತೆ ಕಾಡುತ್ತಿದೆ. ಸಭೆ ನಡೆಯಬೇಕೆಂದರೆ ಕನಿಷ್ಠ 25 ಮಂದಿ ಸದಸ್ಯರ ಬಲ ಬೇಕು. ಆದರೆ ಸ್ವ-ಪಕ್ಷ ಸದಸ್ಯರುಗಳೇ ಪದೇ ಪದೇ ಸಭೆಗೆ ಗೈರಾಗುತ್ತಿರುವುದರಿಂದ ಸಭೆ ನಡೆಯುತ್ತಿಲ್ಲ. ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಗುರುವಾರವೂ ಸಹ ಮತ್ತೆ ಸಭೆಯನ್ನು ಅಧ್ಯಕ್ಷರು ಮುಂದೂಡಿದ್ದಾರೆ. ಅಲ್ಲದೇ ಹೀಗೆ ಸದಸ್ಯರ ವರ್ತನೆ ಮುಂದುವರಿಸಿದರೆ, ಸಭೆಗೆ ಗೈರಾಗುವ ಸದಸ್ಯರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ಬಿಜೆಪಿ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews