ನಾಲ್ಕು ದಿನ ಕಳೆದರೂ ಸಿಎಂ ಆಯ್ಕೆ ಕಗ್ಗಂಟು – ರಾಹುಲ್, ಖರ್ಗೆ ಮಾಡಿದ ಪ್ರಯತ್ನಗಳೆಲ್ಲ ವಿಫಲ

Public TV
2 Min Read
rahul gandhi dk shivakumar siddaramaiah

ನವದೆಹಲಿ/ಬೆಂಗಳೂರು: ಕರ್ನಾಟಕದ ಮತದಾರ ಪ್ರಭುಗಳು ಕಾಂಗ್ರೆಸ್‌ಗೆ ಪೂರ್ಣ ಬಹುಮತ ನೀಡಿ ಐದು ದಿನ ಕಳೆದಿದೆ. ಆದ್ರೆ ಈವರೆಗೂ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿಲ್ಲ. ಪಕ್ಷ ಅಧಿಕಾರಕ್ಕೆ ಬರೋವರೆಗೂ ಇದ್ದ ನಾಯಕರಲ್ಲಿದ್ದ ಒಗ್ಗಟ್ಟು, ಈಗ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ಕಾಣುತ್ತಲೇ ಇಲ್ಲ.

4 ದಿನ ಕಳೆದರೂ ಸಿಎಂ ಆಯ್ಕೆಗೆ ಕಸರತ್ತು ನಡೆಯುತ್ತಲೇ ಇದೆ. ಪ್ರಬಲ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಲ್ಲಿ ಒಮ್ಮತ ಮೂಡಿಸುವಲ್ಲಿ ಹೈಕಮಾಂಡ್ ನಾಯಕರು ಸಫಲರಾಗಿಲ್ಲ. ಒಂದು ಹಂತದಲ್ಲಿ ಸಿದ್ದರಾಮಯ್ಯ ಸಿಎಂ, ಡಿಕೆ ಶಿವಕುಮಾರ್ ಡಿಸಿಎಂ ಆಗ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು. ಹೈಕಮಾಂಡ್ ಅಧಿಕೃತವಾಗಿ ತನ್ನ ಘೋಷಣೆ ಪ್ರಕಟಿಸುವ ಮುನ್ನವೇ ರಾಜ್ಯದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು, ಬೆಂಬಲಿಗರು ವಿಜಯೋತ್ಸವ ಆಚರಿಸಿದ್ದರು. ಆದರೆ ಹೈಕಮಾಂಡ್‌ನ ಈ ಸೂತ್ರಕ್ಕೆ ಡಿಕೆ ಶಿವಕುಮಾರ್ ಸುತಾರಾಂ ಒಪ್ಪದ ಕಾರಣ ಈ ಫಾರ್ಮುಲ ಫೇಲ್ ಆಯ್ತು. ಇದನ್ನೂ ಓದಿ: ಕಿಂಗ್ ಮೇಕರ್ ಆಗುತ್ತೇನೆ ಎಂಬ ಅಹಂನಲ್ಲಿ ವಿದೇಶಕ್ಕೆ ಹಾರಿದ್ದ ಹೆಚ್‍ಡಿಕೆ : ಸಿಪಿ ಯೋಗೇಶ್ವರ್ ವ್ಯಂಗ್ಯ

siddaramaiah dk shivakumar1

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಳಿಕ ರಾಹುಲ್ ಗಾಂಧಿ ಕೂಡ, ಡಿಕೆ ಶಿವಕುಮಾರ್ ಮನವೊಲಿಸುವಲ್ಲಿ ವಿಫಲರಾದರು. ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಮೇಲಿಂದ ಮೇಲೆ ಸಭೆಗಳನ್ನು ನಡೆಸಿದರೂ ಪ್ರಯೋಜನವಾಗಲಿಲ್ಲ. ಶಿಮ್ಲಾದಿಂದ ಪ್ರಿಯಾಂಕಾ ಗಾಂಧಿ ಕರೆ ಮಾಡಿದ್ರೂ ಡಿಕೆ ಶಿವಕುಮಾರ್ ಮಾತ್ರ ಪಟ್ಟದ ವಿಚಾರದಲ್ಲಿ ತಮ್ಮ ನಿಲುವು ಬದಲಿಸಲಿಲ್ಲ. ಇಬ್ಬರು ನಾಯಕರು ಒಂದು ಕಡೆ ಸಭೆಯಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಕೂಡ ಸೂಚಿಸಲಿಲ್ಲ.

ಕೊನೆಗೆ ದಿಢೀರ್ ಎಂದು ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ರಣದೀಪ್ ಸುರ್ಜೆವಾಲಾ, ಸಿಎಂ ಆಯ್ಕೆ ಇನ್ನೂ ಫೈನಲ್ ಆಗಿಲ್ಲ. ಚರ್ಚೆಗಳು ಮುಂದುವರಿದಿವೆ. ವದಂತಿಗಳಿಗೆ, ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಗೊಡಬಾರದು. ಒಮ್ಮತದಿಂದ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡ್ತೇವೆ. ಹೈಕಮಾಂಡ್ ನಿರ್ಧಾರ ಮಾಡಿದ ಕೂಡಲೇ ನಿಮಗೇ ಮೊದಲು ತಿಳಿಸ್ತೇವೆ ಎಂದರು. ಇದನ್ನೂ ಓದಿ: ಡಿಕೆಶಿ ಟಾರ್ಗೆಟ್‌ ಮಾಡಿ ಸಿಬಿಐಗೆ ಪ್ರವೀಣ್ ಸೂದ್ ನೇಮಕ‌ – ಕೆ.ಎನ್ ರಾಜಣ್ಣ ಗಂಭೀರ ಆರೋಪ

ಹೀಗಾಗಿ ಸಿಎಂ ಆಯ್ಕೆಯ ಘೋಷಣೆ ಇವತ್ತಿನ ಮಟ್ಟಿಗೆ ನೆನೆಗುದಿಗೆ ಬಿದ್ದಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮೌನ ವಹಿಸಿದ್ದಾರೆ. ಅಂದ ಹಾಗೆ, ಶಿಮ್ಲಾದಲ್ಲಿರುವ ಸೋನಿಯಾ ಗಾಂಧಿ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿದ್ರೆ ಮಾತ್ರ ಬಿಕ್ಕಟ್ಟು ಬಗೆಹರಿಯೋ ಸಂಭವ ಇದೆ. ಸಿಎಂ ಪಟ್ಟದ ಪ್ರಹಸನ ಶನಿವಾರದವರೆಗೂ ಮುಂದುವರಿದರೂ ಅಚ್ಚರಿ ಇಲ್ಲ ಅನ್ನೋ ಮಾತು ಕೇಳಿಬರುತ್ತಿವೆ.

Share This Article