ಬೆಂಗಳೂರು: ದೋಸ್ತಿ ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಮತ್ತು ಜೆಡಿಎಸ್ ನಾಯಕರು ಕಾಂಗ್ರೆಸ್ಸಿಗರನ್ನು ನೋಡುತ್ತಿರುವ ರೀತಿಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಬಲ ಪಕ್ಷದಲ್ಲಿ ವೃದ್ಧಿಸುತ್ತಿದೆ.
ಇವತ್ತು ನಡೆದ ಸೋತ ಅಭ್ಯರ್ಥಿಗಳ ಸಭೆಯಲ್ಲಿ, ಜೆಡಿಎಸ್ ಪಕ್ಷವನ್ನು ಹದ್ದು ಬಸ್ತಿನಲ್ಲಿ ಇಡಲು ನೀವೇ ಸರಿ. ನೀವು ಏನೇ ಮಾಡಿದರು ನಮ್ಮ ಬೆಂಬಲ ಇರುತ್ತೆ ಅಂತಾ ಬಹಿರಂಗವಾಗಿ ಸಿದ್ದರಾಮಯ್ಯಗೆ ಬೆಂಬಲ ಘೋಷಿಸಿದ್ದಾರೆ.
ನಮ್ಮ ಪಕ್ಷ ಉಳಿಬೇಕು ಅಂದರೆ ಜೆಡಿಎಸ್ ನಿಯಂತ್ರಣದಲ್ಲಿಡಿ. ನಮ್ಮ ರಕ್ಷಣೆಗೆ ಅಲ್ಲದೇ ಹೋದರೂ ಪಕ್ಷದ ರಕ್ಷಣೆಗೆ ಮುಖಂಡರು ಎಚ್ಚರಗೊಳ್ಳಿ. ನೀವೇನಾದರೂ ಹೊಂದಾಣಿಕೆ ಮಾಡಿಕೊಳ್ಳಿ. ಆದರೆ ಕಾಂಗ್ರೆಸ್ಸನ್ನು ಉಳಿಸಿ ಅಂತಾ ಸೋತವರು ಆಗ್ರಹಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಉತ್ತರ ಕರ್ನಾಟಕದಲ್ಲಿ ಪಕ್ಷ ಸೋಲಲು ಲಿಂಗಾಯತರು ಕಾರಣ. ಪ್ರತ್ಯೇಕ ಧರ್ಮ ಮಾಡಲು ಹೊರಟಿದ್ದೆ ಪಕ್ಷ ಸೋಲಲು ಕಾರಣ. ಕಳೆದ ಬಾರಿ ನಮಗೆ ಮತ ಹಾಕಿದ್ದ ಎಲ್ಲಾ ಲಿಂಗಾಯತರು ಈ ಬಾರಿ ಬಿಜೆಪಿಗೆ ಹಾಕಿದ್ದಾರೆ. ಪ್ರತ್ಯೇಕ ಧರ್ಮ ಮಾಡಲು ಹೋಗಬಾರದಿತ್ತು ಅಂತಾ ಉತ್ತರ ಕರ್ನಾಟಕದ ಪರಾಜಿತ ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಲೋಕಸಭೆ ಚುನಾವಣೆಲಿ ಸೋತ ಅಭ್ಯರ್ಥಿಗಳಿಗೆ ಮಣೆ ಹಾಕುವಂತೆ ಮನವಿ ಮಾಡಿದ್ದಾರೆ ಅಂತಾ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ಜೆಡಿಎಸ್ ಪಕ್ಷವನ್ನು ಸಂಪೂರ್ಣವಾಗಿ ನಂಬಬೇಡಿ. ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಒಳಗೊಳಗೆ ಕೆಲಸ ಮಾಡಿದ್ದವು. ಕಾಂಗ್ರೆಸ್ ಸೋಲುವುದಕ್ಕೆ ಕೇವಲ ಜನತಾದಳ ಕಾರಣವಲ್ಲ. ಕುಮಾರಸ್ವಾಮಿ ಅಪಪ್ರಚಾರ ಮಾಡಿದ್ದರಿಂದಲೇ ಕಾಂಗ್ರೆಸ್ ಸೋಲುವಂತಾಯ್ತು ಅಂತಾ ಮಾಜಿ ಸಚಿವ ಎ. ಮಂಜು ದೂರಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಕಾಂಗ್ರೆಸ್ ಪರಾಜಿತ ಅಭ್ಯರ್ಥಿಗಳ ಸಭೆಯಿಂದ ಚೆಲುವರಾಯಸ್ವಾಮಿ ಆಂಡ್ ಗ್ಯಾಂಗ್ ದೂರವೇ ಉಳಿದಿದ್ದು ಕುತೂಹಲ ಕೆರಳಿಸಿದೆ. ಇನ್ನು ಮಾಜಿ ಸಚಿವ ಹೆಚ್. ಸಿ ಮಹದೇವಪ್ಪ ಕೂಡ ಈ ಸಭೆಯಲ್ಲಿ ಕಾಣಿಸಿಕೊಳ್ಳಲಿಲ್ಲ.